ಸಾರಾಂಶ
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು, ನಗರದ ಹಲವು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿ ರಸ್ತೆ, ಮೇಲ್ಸೇತುವೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು, ನಗರದ ಹಲವು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿ ರಸ್ತೆ, ಮೇಲ್ಸೇತುವೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಿದರು.ನಾಲ್ಕೈದು ದಿನಗಳಿಂದ ನಿತ್ಯ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಶನಿವಾರವೂ ನಗರದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಶನಿವಾರ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂತು. ಮಧ್ಯಾಹ್ನದಿಂದ ನಗರದ ವಿವಿಧ ಭಾಗದಲ್ಲಿ ಆರಂಭಗೊಂಡ ಮಳೆ ಧಾರಾಕಾರವಾಗಿ ಸುರಿಯಿತು. ಕೆಲ ಹೊತ್ತು ಬಿಡುವು ನೀಡಿದ ಮಳೆ ರಾತ್ರಿವರೆಗೆ ಸುರಿಯಿತು.
ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕೆ.ಆರ್.ಮಾರುಕಟ್ಟೆಯ ಬಳಿಯ ಬಿಜಿಎಸ್ ಮೇಲ್ಸೇತುವೆ ಆರಂಭದಲ್ಲಿ ಭಾರೀ ಪ್ರಮಾಣ ನಿಂತ ಪರಿಣಾಮ ವಾಹನಗಳು ಸಂಚಾರ ನಿಧಾನವಾಗಿ ಸಂಚರಿಸಿದವು. ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್‌ನಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರ ಸಂಪೂರ್ಣವಾಗಿ ಸ್ಥಬ್ಧವಾಗಿ ಪರದಾಡಬೇಕಾಯಿತು.ಅಷ್ಟಪಥ ಅಂಡರ್‌ಪಾಸ್‌ನಲ್ಲಿ ನೀರು: ಓಕಳಿಪುರದ ಅಷ್ಟಪಥ ಅಂಡರ್ ಪಾಸ್‌ನಲ್ಲಿ (ಖೋಡೆ ಜಂಕ್ಷನ್) ಶನಿವಾರ ರಾತ್ರಿ ಭಾರೀ ಪ್ರಮಾಣದ ನೀರು ನಿಂತುಕೊಂಡಿದ್ದರಿಂದ ಮೆಜೆಸ್ಟಿಕ್ ಹಾಗೂ ಮತ್ತು ರಾಜಾಜಿನಗರದ ಕಡೆಗೆ ವಾಹನ ಸಂಚಾರ ನಿಧಾನಗತಿ ಉಂಟಾಗಿತ್ತು. ವೀರಸಂದ್ರ ಜಂಕ್ಷನ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ ಹೆಬ್ಬಗೋಡಿ ಕಡೆಗೆ ಸಂಚಾರ ಸಮಸ್ಯೆ ಉಂಟಾಗಿತ್ತು. ಹಳೇ ಮದ್ರಾಸ್ ರಸ್ತೆ, ಸಿದ್ದಾಪುರ ಸೇರಿದಂತೆ ಮೊದಲಾದ ಕಡೆ ಸಮಸ್ಯೆ ಉಂಟಾಗಿತ್ತು. ಜೀವನ್ ಭೀಮನಗರ ಮುಖ್ಯ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.ಬಸವೇಶ್ವರನಗರದಲ್ಲಿ 10.9 ಸೆಂ.ಮೀ. ಮಳೆ: ಶನಿವಾರ ನಗರದಲ್ಲಿ ಸರಾಸರಿ 2.8 ಸೆಂ.ಮೀ ಮಳೆಯಾಗಿದೆ. ರಾತ್ರಿ 9.50ರ ಸುಮಾರಿಗೆ ಅತಿ ಹೆಚ್ಚು ಬಸವೇಶ್ವರ ನಗರದಲ್ಲಿ 10.9 ಸೆಂ.ಮೀ ಮಳೆಯಾದ ವರದಿಯಾಗಿದೆ. ನಾಗಪುರ, ಹಂಪಿನಗರದಲ್ಲಿ ತಲಾ 10, ಚೌಡೇಶ್ವರಿನಗರ 7.7, ಮಾರುತಿನಗರ 6.9, ನಂದಿನಿ ಲೇಔಟ್ 6.7, ರಾಜಾಜಿನಗರ 5.9, ವಿದ್ಯಾರಣ್ಯಪುರ 4.3, ಎಚ್‌ಎಎಲ್ 4.2, ವಿ.ನಾಗೇನಹಳ್ಳಿ 4, ದೊರೆಸಾನಿಪಾಳ್ಯ 3.9, ಹೇರೋಹಳ್ಳಿ 3.8, ಕಾಟನ್ ಪೇಟೆ 3.7, ಮಾರತ್ತಹಳ್ಳಿ 3.6, ರಾಜರಾಜೇಶ್ವರಿನಗರ 3.4, ವಿಶ್ವೇಶ್ಚರಪುರ 3.2 ಸೆಂ.ಮೀ. ಮಳೆಯಾಗಿದೆ.