ಫಲಪುಷ್ಪ ಪ್ರದರ್ಶನಕ್ಕೆ 1 ಲಕ್ಷ ಜನ ಭೇಟಿ - 11 ದಿನದಲ್ಲಿ 4.38 ಲಕ್ಷ ಜನರಿಂದ ಫ್ಲವರ್ ಶೋ ವೀಕ್ಷಣೆ

| N/A | Published : Jan 27 2025, 07:42 AM IST

Lalbagh Flower Show

ಸಾರಾಂಶ

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಬರೋಬ್ಬರಿ 1.17 ಲಕ್ಷ ಜನ ಭೇಟಿ ನೀಡಿದ್ದು, ಟಿಕೆಟ್‌ಗಳ ಮಾರಾಟದಿಂದ ಒಂದೇ ದಿನಕ್ಕೆ 65 ಲಕ್ಷ ರು. ಸಂಗ್ರಹವಾಗಿದೆ.

 ಬೆಂಗಳೂರು : ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಬರೋಬ್ಬರಿ 1.17 ಲಕ್ಷ ಜನ ಭೇಟಿ ನೀಡಿದ್ದು, ಟಿಕೆಟ್‌ಗಳ ಮಾರಾಟದಿಂದ ಒಂದೇ ದಿನಕ್ಕೆ 65 ಲಕ್ಷ ರು. ಸಂಗ್ರಹವಾಗಿದೆ.

ರಜಾ ದಿನವಾಗಿದ್ದರಿಂದ ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನತೆ ಫಲಪುಷ್ಪಗಳ ಸೊಬಗನ್ನು ಕಣ್ತುಂಬಿಕೊಂಡರು. ಪಾಸ್‌ ಹೊಂದಿದ 81,250 ಮಂದಿ, 35,811 ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ಭಾನುವಾರ 1.17 ಲಕ್ಷ ಜನ ಭೇಟಿ ನೀಡಿದ್ದು, ಒಟ್ಟಾರೆ 11 ದಿನದಲ್ಲಿ 4.38 ಲಕ್ಷ ಜನರು ಫಲಪುಷ್ಪ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿದ್ದರಿಂದ ಲಾಲ್‌ಬಾಗ್‌ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆಯೂ ಉಂಟಾಗಿತ್ತು. ವಾಹನಗಳ ನಿಲುಗಡೆಗೆ ಪ್ರವೇಶ ದ್ವಾರಗಳ ಸಮೀಪವೇ ಪ್ರತ್ಯೇಕ ಸ್ಥಳಗಳನ್ನು ನಿಗಧಿಪಡಿಸಿದ್ದರೂ ಕೆಲವರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ತೆರಳಿದ್ದರಿಂದ ಸಂಚಾರ ದಟ್ಟಣೆಯೂ ಉಂಟಾಯಿತು.

ಲಾಲ್‌ಬಾಗ್‌ನ ಕೆರೆ ದಂಡೆ, ಗಾಜಿನ ಮನೆ ಸೇರಿದಂತೆ ಎಲ್ಲಡೆಯೂ ಜನಜಂಗುಳಿ ಹೆಚ್ಚಾಗಿತ್ತು. ತೋಟಗಾರಿಕಾ ಇಲಾಖೆಯು ಈ ಬಾರಿಯ 217 ನೇ ಫಲಪುಷ್ಪ ಪ್ರದರ್ಶನದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ರಾಮಾಯಣ ಮಹಾಕಾವ್ಯದ ಘಟನೆಗಳನ್ನು ಹೂವುಗಳ ಮೂಲಕ ಅನಾವರಣಗೊಳಿಸಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.

ಇಂದೇ ಕೊನೆಯ ದಿನ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.16 ರಂದು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7.30 ರವರೆಗೂ ಪ್ರದರ್ಶನವಿರಲಿದೆ. ಜ.27 ರಂದು ಸಂಜೆ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬೀಳಲಿದೆ.