ಸಾರಾಂಶ
ಮಳೆ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ ₹10 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯ ತೆರವುಗೊಳಿಸುವಂತೆ ನಿರ್ದೇಶಿಸಿದ್ದಾರೆ.
ಬೆಂಗಳೂರು : ಮಳೆ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ ₹10 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯ ತೆರವುಗೊಳಿಸುವಂತೆ ನಿರ್ದೇಶಿಸಿದ್ದಾರೆ.
ಬುಧವಾರ ಪ್ರವಾಹದಿಂದ ಹಾನಿಗೀಡಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಡೆಸಿದ ಅವರು, ವಸತಿ ಇಲ್ಲದವರಿಗೆ ವಾಸಿಸಲು ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್, ಬ್ಯಾಟರಾಯನಪುರದ ಮರಿಯಣ್ಣಪಾಳ್ಯ, ಕೆ.ಆರ್ ಪುರದ ಶ್ರೀ ಸಾಯಿ ಲೇಔಟ್‌ಗೆ ಭೇಟಿ ನೀಡಿ ಪರಿಹಾರ ಕಾರ್ಯ ವೀಕ್ಷಿಸಿ, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಸ್ವಚ್ಛತೆ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡರು ಕೆಲಸ ಮಾಡುತ್ತಿದ್ದಾರೆ. ಎನ್‌ಡಿಆರ್‌ಎಫ್ ನಿಧಿ ಸೇರಿದಂತೆ ವಿವಿಧ ಯೋಜನೆಗಳ ಅಡಿ ಕೆರೆಗಳ ಸ್ವಚ್ಚತೆ, ಹೂಳು ತೆಗೆಯುವ ಕೆಲಸ ಮಾಡಲಾಗುವುದು. ಶೀಘ್ರದಲ್ಲೇ ಕೆರೆ ನಿರ್ವಹಣಾ ಸಮಿತಿಯ ಸಭೆ ಕರೆಯಲಾಗುವುದು ಎಂದು ಹೇಳಿದರು.
ಮುಲಾಜಿಲ್ಲದೆ ಒತ್ತುವರಿ ತೆರವು
ಅನೇಕ ಕಡೆ ಖಾಸಗಿಯವರು ರಾಜಕಾಲುವೆ ಒತ್ತುವರಿ ತೆರವುಗೊಳಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ತುರ್ತು ಸಂದರ್ಭದಲ್ಲಿ ಇವುಗಳಿಗೆ ಅವಕಾಶವಿಲ್ಲ. ತೆರವುಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಯಾವುದನ್ನೂ ಪರಿಗಣಿಸದೆ ಕೂಡಲೇ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿ. ಪ್ರವಾಹ ಪರಿಸ್ಥಿತಿ ನಿರ್ವಹಣೆ ಅಡಿಯಲ್ಲಿ ಕೂಡಲೇ ಆದೇಶ ಹೊರಡಿಸಿ ಎಂದು ಜಿಲ್ಲಾಧಿಕಾರಿಗೆ ನಿರ್ದೇಶಿಸಿ, ಒತ್ತುವರಿ ತೆರವು ಕಾರ್ಯ ಕೂಡಲೇ ಆರಂಭಿಸುವಂತೆ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳಿಗೆ ಆದೇಶಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸ್ಥಳಾಂತರಗೊಂಡವರಿಗೆ ಸೂಕ್ತ ಸೌಲಭ್ಯ
ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟನ್ನು ಸದ್ಯಕ್ಕೆ ರಕ್ಷಣಾ ಕಾರ್ಯಕ್ಕಾಗಿ ಬಿಬಿಎಂಪಿ ಸುಪರ್ದಿಗೆ ತೆಗೆದುಕೊಂಡಿದೆ. ಶೇ.95ರಷ್ಟು ನಿವಾಸಿಗಳು ಸ್ಥಳಾಂತರಕ್ಕೆ ಸಹಕಾರ ನೀಡಿದ್ದಾರೆ. 20 ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದಿದ್ದರೂ ನಾವು ಇರುತ್ತೇವೆ ಎನ್ನುತ್ತಿದ್ದಾರೆ. ಅವರನ್ನು ಇಲ್ಲಿಯೇ ಬಿಡಲು ಸಾಧ್ಯವಿಲ್ಲ. ಕುಡಿಯಲು ನೀರು, ತಿನ್ನಲು ಆಹಾರವಿಲ್ಲ. ಹೀಗಿದ್ದಾಗ ಏನಾದರೂ ತೊಂದರೆಯಾದರೆ ನಾವು ಜವಾಬ್ದಾರರಾಗುತ್ತೇವೆ. ಈ ಕಾರಣಕ್ಕೆ ಅವರ ಮನವೊಲಿಸಿ ಹತ್ತಿರದಲ್ಲಿಯೇ ವಸತಿಗೃಹಗಳಲ್ಲಿ ವ್ಯವಸ್ಥೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಯಲಹಂಕ ಇತಿಹಾಸದಲ್ಲಿಯೇ 115- 120 ವರ್ಷಗಳ ನಂತರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಎಲ್ಲೆಲ್ಲಿ ನೀರು ನುಗ್ಗುತ್ತಿದೆ ಹಾಗೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಗೆ ಜಾಗಗಳನ್ನು ಗುರುತಿಸಲಾಗುತ್ತಿದೆ ಎಂದು ಹೇಳಿದರು.
ಕೆರೆಗಳ ಪಕ್ಕ ನೀರು ಹರಿಯಲು ಮತ್ತು ನಿಂತುಕೊಳ್ಳಲು ಜಾಗವಿತ್ತು. ಈಗ ಜಾಗ ಕಡಿಮೆಯಾಗಿದೆ. ಅದಕ್ಕಾಗಿ ಶಾಶ್ವತ ಪರಿಹಾರವನ್ನು ಕಲ್ಪಿಸಲಾಗುವುದು. ಈ ರೀತಿಯ ಅವಘಡ ನಮ್ಮಲ್ಲಿ ಮಾತ್ರವಲ್ಲ, ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ಆಗಿದೆ. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಉಪ ಮುಖ್ಯಮಂತ್ರಿಯ ಕಾರ್ಯದರ್ಶಿ ರಾಜೇಂದ್ರ ಚೋಳನ್, ಕೆಆರ್‌ಪುರ ಶಾಸಕ ಬಿ.ಎ.ಬಸವರಾಜ್ ಇದ್ದರು.
ಕೆರೆಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ 5 ಲಕ್ಷ
ಬೆಂಗಳೂರು-ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣದ ಎದುರಿದ ಕೆರೆಯಲ್ಲಿ ಮುಳುಗಿ ಮೃತಪಟ್ಟ ಕೆಂಗೇರಿಯ ಹರ್ಷಲೇಔಟ್‌ನ ನಿವಾಸಿ ನಾಗಮ್ಮ ಅವರ ಮಕ್ಕಳಾದ ಜಾನ್ಸನ್ ಶ್ರೀನಿವಾಸ್ ಹಾಗೂ ಮಹಾಲಕ್ಷ್ಮಿ ಅವರ ಕುಟುಂಬಕ್ಕೆ ಬಿಬಿಎಂಪಿಯಿಂದ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.