ಸಾರಾಂಶ
ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ₹500 ಮುಖಬೆಲೆಯ ನಕಲಿಯಂತೆ ಕಾಣುವ ನೋಟುಗಳ ಕಂತೆ ಪತ್ತೆಯಾಗಿದೆ.
ದಾಂಡೇಲಿ : ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ₹500 ಮುಖಬೆಲೆಯ ನಕಲಿಯಂತೆ ಕಾಣುವ ನೋಟುಗಳ ಕಂತೆ ಪತ್ತೆಯಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ, ಈ ನೋಟುಗಳು ಹಾಗೂ ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿನಗರದಲ್ಲಿರುವ ನೂರ್‌ಜಾನ್ ಝುಂಜವಾಡಕರ ಎಂಬುವರ ಮನೆಯನ್ನು ಗೋವಾ ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆಗೆ ಪಡೆದು ವಾಸವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಆದರೆ, ಮನೆಯ ಹಿಂಬಾಗಿಲ ಚಿಲಕವನ್ನು ಸರಿಯಾಗಿ ಹಾಕಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ಬಾಗಿಲು ತೆರೆದು ನೋಡಿದಾಗ ನಕಲಿ ನೋಟುಗಳು ಪತ್ತೆಯಾಗಿವೆ. ಬಳಿಕ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಗರ ಪೊಲೀಸರು ಪರಿಶೀಲಿಸಿದಾಗ ₹500 ಮುಖಬೆಲೆಯ ನೋಟಿನಲ್ಲಿ ‘ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ’ಎಂಬ ಬರಹ ಇದೆ. (ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದಿರುತ್ತದೆ.) ಗವರ್ನರ್ ಸಹಿ ಇಲ್ಲ. ನೋಟುಗಳಲ್ಲಿ ಸಂಖ್ಯೆ ಇರುವ ಜಾಗದಲ್ಲಿ ಸೊನ್ನೆಯನ್ನಷ್ಟೇ ನಮೂದಿಸಲಾಗಿದೆ. ಜೊತೆಗೆ, ‘ಮೂವೀ ಶೂಟಿಂಗ್ ಪರ್ಪೋಸ್ ಒನ್ಲಿ’ ಎಂದು ಬರೆದಿರುವ ಶೈನಿಂಗ್ ಪೇಪರ್‌ನಲ್ಲಿ ಈ ನೋಟುಗಳು ಮುದ್ರಿತಗೊಂಡಿವೆ. ₹500 ಮುಖಬೆಲೆಯ ನಕಲಿ ತರದ 50 ನೋಟುಗಳ ಬಂಡಲ್‌ನಂತೆ ಇಡಲಾಗಿದೆ. ಅಂದಾಜು ₹14 ಕೋಟಿ ನಕಲಿ ತರದ ನೋಟುಗಳು ಪತ್ತೆಯಾಗಿವೆ.
ಘಟನೆ ಕುತೂಹಲಕ್ಕೆ ಕಾರಣವಾಗಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಷದ್ ಖಾನ್ ನನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.