ಸಾರಾಂಶ
ರಾಜ್ಯದಲ್ಲಿ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲು ರಕ್ತದಾನ ಜಾಗೃತಿ ಹಾಗೂ ರಕ್ತ ಸಂಗ್ರಹಣೆಗೆ ವಿಶೇಷ ಒತ್ತು ನೀಡಿದ್ದು, ಪರಿಣಾಮ ರಕ್ತ ಸಂಗ್ರಹಣೆ ಗುರಿಗಿಂತ ಶೇ.24ರಷ್ಟು ಹೆಚ್ಚು ಪ್ರಗತಿ ಸಾಧಿಸಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲು ರಕ್ತದಾನ ಜಾಗೃತಿ ಹಾಗೂ ರಕ್ತ ಸಂಗ್ರಹಣೆಗೆ ವಿಶೇಷ ಒತ್ತು ನೀಡಿದ್ದು, ಪರಿಣಾಮ ರಕ್ತ ಸಂಗ್ರಹಣೆ ಗುರಿಗಿಂತ ಶೇ.24ರಷ್ಟು ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಸೇವೆಯ ಗುಣಮಟ್ಟ ಮತ್ತಷ್ಟು ಹೆಚ್ಚಿಸಲು ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದ 4 ಸರ್ಕಾರಿ ರಕ್ತ ಕೇಂದ್ರಗಳನ್ನು ಪ್ರಾದೇಶಿಕ ಉತ್ಕೃಷ್ಟ ರಕ್ತ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಲ್ಲದೆ, 147 ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಜಾರಿಗೆ ತರುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ರಕ್ತ ಸಂಗ್ರಹಣೆ ಹಾಗೂ ಸಾಗಣೆಗೆ 4 ಹೊಸ ಸಂಚಾರಿ ರಕ್ತ ಕೇಂದ್ರಗಳ ಸೇವೆಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಸೋಮವಾರ ಆರೋಗ್ಯ ಇಲಾಖೆ, ರಾಜ್ಯ ರಕ್ತಚಾಲನಾ ಪರಿಷತ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದೆ. ಅದಕ್ಕೆ ಅನುಗುಣವಾಗಿ 2024-25ರಲ್ಲಿ 8.15 ಲಕ್ಷ ರಕ್ತದ ಯುನಿಟ್ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಆದರೆ 10.11 ಲಕ್ಷ ರಕ್ತದ ಯುನಿಟ್ ಸಂಗ್ರಹಿಸುವ ಮೂಲಕ ಶೇ.24% ಹೆಚ್ಚು ಪ್ರಗತಿ ಸಾಧಿಸಲಾಗಿದೆ. 1 ಯುನಿಟ್ ರಕ್ತವು 4 ಜೀವಗಳನ್ನು ಉಳಿಸಬಹುದು. ಹೀಗಾಗಿ ನಮ್ಮ ಯುವಕ ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು ಎಂದು ಸಚಿವರು ಕರೆ ನೀಡಿದರು.
ಗರ್ಭಿಣಿಯರು ಹಾಗೂ ತಾಯಂದಿರ ಸಾವು ತಡೆಯುವಲ್ಲಿ ರಕ್ತದ ಪಾತ್ರ ಪ್ರಮುಖವಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಇರಲಿಲ್ಲ. ಇದೀಗ 147 ತಾಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಹೊಸದಾಗಿ 11 ಸರ್ಕಾರಿ ರಕ್ತ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ 4 ಸರ್ಕಾರಿ ರಕ್ತ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಪ್ರಾದೇಶಿಕ ಉತ್ಕೃಷ್ಟ ಕೇಂದ್ರ) ರಕ್ತ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಮೂಲಕ ರಾಜ್ಯದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳ ರೀತಿ ರಕ್ತದ ಗುಣಮಟ್ಟ ಕಾಯ್ದುಕೊಳ್ಳಲಾಗುವುದು. ಉತ್ಕೃಷ್ಟ ಕೇಂದ್ರಗಳಿಂದ ನುರಿತ ತಜ್ಞರ ಮೂಲಕ ಎಲ್ಲಾ ರಕ್ತ ಕೇಂದ್ರಗಳಿಗೆ ತರಬೇತಿ ಕಾರ್ಯಕ್ರಮ, ಜಿಲ್ಲೆಗಳಲ್ಲಿ ರಕ್ತದ ಕೊರತೆಯಿರುವ ರಕ್ತ ಕೇಂದ್ರಗಳಿಗೆ, ರಕ್ತ ಶೇಖರಣಾ ಘಟಕಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸಮರ್ಪಕವಾದ, ಸುರಕ್ಷಿತ ಮತ್ತು ಗುಣಮಟ್ಟದ ರಕ್ತ ಒದಗಿಸುವುದನ್ನು ಖಚಿತಪಡಿಸಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಸರ್ಕಾರದ ವತಿಯಿಂದ ಪ್ರಸ್ತುತ 9 ರಕ್ತ ಸಂಗ್ರಹ ಹಾಗೂ ಸಾಗಣಿ ಕೇಂದ್ರ ಸೇವೆಯಲ್ಲಿದ್ದು, ಹೊಸದಾಗಿ 4 ರಕ್ತ ಸಾಗಣೆ ಮತ್ತು ರಕ್ತ ಸಂಗ್ರಹಣಾ ವಾಹನ (BCTV) ಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರಕ್ತಚಲನ ಪರಿಷತ್ ನಿರ್ದೇಶಕರಾದ ವಿನೋತ್ ಪ್ರಿಯಾ, ಆರೋಗ್ಯ ಇಲಾಖೆ ನಿರ್ದೇಶಕರಾದ ಡಾ. ಉಮಾಬುಗ್ಗಿ ಹಾಜರಿದ್ದರು.