ಸಾರಾಂಶ
ನೀರಾವರಿಗೆ ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್-ಬಿ ಯೋಜನೆಯಡಿ ಸೌರ ಪಂಪ್‌ಸೆಟ್ ಪಡೆಯಲು ರಾಜ್ಯದ 18 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ
ಬೆಂಗಳೂರು: ನೀರಾವರಿಗೆ ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್-ಬಿ ಯೋಜನೆಯಡಿ ಸೌರ ಪಂಪ್‌ಸೆಟ್ ಪಡೆಯಲು ರಾಜ್ಯದ 18 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.
ಪಿಎಂ -ಕುಸುಮ್ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (ಕುಸುಮ್) ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಕುಸುಮ್ ಬಿ ಯೋಜನೆಯಡಿ ಸೌರ ಕೃಷಿ ಪಂಪ್‌ಸೆಟ್ ಅಳವಡಿಸಲು ಕೇಂದ್ರದಿಂದ ಶೇ.30 ಸಬ್ಸಿಡಿ ಹಾಗೂ ರಾಜ್ಯ ಸರ್ಕಾರದಿಂದ ಶೇ.30 ರಷ್ಟು ಸಬ್ಸಿಡಿ ನೀಡಿ ಉಳಿದ ಶೇ.40ರಷ್ಟು ಪಾಲು ಫಲಾನುಭವಿ ರೈತ ಭರಿಸಬೇಕಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸಬ್ಸಿಡಿ ಪಾಲನ್ನು ಶೇ.30ರಿಂದ 50ಕ್ಕೆ ಏರಿಸಿದೆ. ಈ ಹಿನ್ನೆಲೆಯಲ್ಲಿ ಈವರೆಗೆ ರಾಜ್ಯದ 18 ಸಾವಿರ ರೈತರು ಸೌರಪಂಪ್ ಸೆಟ್ ಪಡೆಯಲು ಸೌರಮಿತ್ರ ವೆಬ್‌ಸೈಟ್/ ಆ್ಯಪ್‌ನಲ್ಲಿ ನೋಂದಣಿ ಮಾಡಿದ್ದಾರೆ ಎಂದು ಗುಪ್ತಾ ತಿಳಿಸಿದರು.
ನೋಂದಣಿ ಹೇಗೆ?: ರೈತರು ತಮ್ಮ ಆಧಾರ್, ಆರ್‌ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್‌ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 080-22202100 ಸಂಪರ್ಕಿಸಬಹುದು.