ರಾಜ್ಯದಲ್ಲಿ 22 ಲಕ್ಷ ಅನರ್ಹ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ : ಅನರ್ಹ ಪಡಿತರ ಚೀಟಿ ಪತ್ತೆಗೆ ತಂತ್ರಾಂಶದ ಮೊರೆ

| Published : Oct 01 2024, 11:14 AM IST

Ration card

ಸಾರಾಂಶ

ಅನರ್ಹ ಪಡಿತರ ಚೀಟಿಗಳನ್ನು ರದ್ದು ಪಡಿಸುವ ಕಾರ್ಯಕ್ಕೆ ವೇಗ ನೀಡಿರುವ ಆಹಾರ ಇಲಾಖೆ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಕುಟುಂಬ ತಂತ್ರಾಂಶದ ಮೊರೆ ಹೋಗಿದ್ದು ರಾಜ್ಯದಲ್ಲಿ ಒಟ್ಟು 22,62,413 ಅನರ್ಹ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳು ಇರುವುದನ್ನು ಈ ತಂತ್ರಾಂಶದ ಮೂಲಕ ಪತ್ತೆ ಮಾಡಿದೆ.

ಬೆಂಗಳೂರು : ಅನರ್ಹ ಪಡಿತರ ಚೀಟಿಗಳನ್ನು ರದ್ದು ಪಡಿಸುವ ಕಾರ್ಯಕ್ಕೆ ವೇಗ ನೀಡಿರುವ ಆಹಾರ ಇಲಾಖೆ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಕುಟುಂಬ ತಂತ್ರಾಂಶದ ಮೊರೆ ಹೋಗಿದ್ದು ರಾಜ್ಯದಲ್ಲಿ ಒಟ್ಟು 22,62,413 ಅನರ್ಹ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳು ಇರುವುದನ್ನು ಈ ತಂತ್ರಾಂಶದ ಮೂಲಕ ಪತ್ತೆ ಮಾಡಿದೆ.

ಕುಟುಂಬ ತಂತ್ರಾಂಶದಿಂದ ಸರ್ಕಾರ ನಗದಿಪಡಿಸಿರುವ ಮಾನದಂಡಗಳ ವಿರುದ್ಧವಾಗಿ ಪಡೆದ ಅನರ್ಹ ಪಡಿತರ ಚೀಟಿಗಳ ವಿವರ ನೀಡುವಂತೆ ಆಹಾರ ಇಲಾಖೆ, ಇ -ಆಡಳಿತ ಕೇಂದ್ರಕ್ಕೆ ಮನವಿ ಮಾಡಿತ್ತು. ಈ ತಂತ್ರಾಂಶದಿಂದ ದೊರೆತ ಮಾಹಿತಿಯಂತೆ 10,97,621 ಅನರ್ಹ ಬಿಪಿಎಲ್​, ಅಂತ್ಯೋದಯ, 1,06,152 ಚೀಟಿಗಳು ಆದಾಯ ತೆರಿಗೆ ಪಾವತಿದಾರರು, 10,54,368 ಕಾರ್ಡ್​ಗಳು 1.2 ಲಕ್ಷಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹಾಗೂ 4,272 ಚೀಟಿ ಕೆಜಿಐಡಿ, ಎಚ್​ಆರ್​ಎಂಎಸ್​ನಲ್ಲಿ ಜೋಡಣೆ ಆಗಿರುವುದನ್ನು ಕುಟುಂಬ ತಂತ್ರಾಂಶದಲ್ಲಿ ಇ-ಆಡಳಿತ ಕೇಂದ್ರ ಪತ್ತೆ ಹಚ್ಚಿದೆ.

ಕುಟುಂಬ ತಂತ್ರಾಂಶದಿಂದ ಪಡೆದ ಅನರ್ಹ ಪಡಿತರ ಚೀಟಿಯನ್ನು 10 ದಿನದೊಳಗೆ ಮುಕ್ತಾಯಗೊಳಿಸಬೇಕು. ಕಚೇರಿಯಿಂದ ಒದಗಿಸಿರುವ ಗೂಗಲ್​ ಡ್ರೈವ್​ನಲ್ಲಿ ಪ್ರತಿನಿತ್ಯ ಮಾಹಿತಿಯನ್ನು ಅಪ್ಡೇಟ್​ ಮಾಡಬೇಕು. ಪರಿಶೀಲನೆ ಕಾರ್ಯ ಮುಕ್ತಾಯಗೊಂಡ ನಂತರ ಕೇಂದ್ರ ಕಚೇರಿಗೆ ವಿವರ ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲ ಜಂಟಿ ಮತ್ತು ಉಪನಿರ್ದೇಶಕರಿಗೆ ಆಹಾರ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ವಾರ್ಷಿಕ 1.20 ಲಕ್ಷ ರು.ಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರ, ಮನೆಯಲ್ಲಿ ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ-ಅನುದಾನರಹಿತ ಶಾಲಾ ಕಾಲೇಜು ನೌಕರರು, ನೊಂದಾಯಿತ ಗುತ್ತಿಗೆದಾರರು, ಬಹುರಾಷ್ಟ್ರೀಯ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಸ್ವಂತಕ್ಕಾಗಿ ಒಂದು ಆಟೋರೀಕ್ಷಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ ಕಾರು ಹೊಂದಿರುವುದು ಸೇರಿ 14 ಮಾನದಂಡ ಮುಂದಿಟ್ಟುಕೊಂಡು ಬಿಪಿಎಲ್​ ಕಾರ್ಡ್​ ರದ್ದುಪಡಿಸುವ ಪ್ರಕ್ರಿಯೆಗೆ ಇಲಾಖೆ ಮುಂದಾಗಿದೆ.