ಸಾರಾಂಶ
ಹೆಬ್ಬಾಳ ಮೇಲ್ಸೇತುವೆಯಲ್ಲಿ ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಏ.17ರಿಂದ 21ರವರೆಗೆ ಪ್ರತಿ ದಿನ ರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆವರೆಗೆ ಎಲ್ಲಾ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಬೆಂಗಳೂರು : ಹೆಬ್ಬಾಳ ಮೇಲ್ಸೇತುವೆಯಲ್ಲಿ ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಏ.17ರಿಂದ 21ರವರೆಗೆ ಪ್ರತಿ ದಿನ ರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆವರೆಗೆ ಎಲ್ಲಾ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಕೈಗೆತ್ತಿಕೊಂಡಿರುವ ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರಾಂಪ್ ನಿರ್ಮಾಣ ಕಾಮಗಾರಿ ಭಾಗವಾಗಿ ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 7 ಉಕ್ಕಿನ ಗರ್ಡರ್‌ಗಳ ಅಳವಡಿಸುವ ಕಾಮಗಾರಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಈ ಮೂರೂ ದಿನ ಮೂರು ತಾಸು ಹೆಬ್ಬಾಳ ಮೇಲ್ಸೇತುವೆಯಲ್ಲಿ ಎಸ್ಟೀಮ್ ಮಾಲ್ ನಿಂದ ಮೇಖಿ ವೃತ್ತದ ಕಡೆಗೆ ಎಲ್ಲಾ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ : ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಕೆಲ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನ ಸಮೀಪದ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ, ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲ ರಸ್ತೆಗೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಮುಂದಕ್ಕೆ ಚಲಿಸಿ ಬಳಿಕ ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮುಖಾಂತರ ಮೇಖ್ರಿ ವೃತ್ತ ತಲುಪಬಹುದಾಗಿದೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.