ಸಾರಾಂಶ
ಕಳೆದ ಸರ್ಕಾರದ ಅವಧಿಯಲ್ಲಿ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದ್ದ 40 ಪರ್ಸೆಂಟ್ ಕಮಿಷನ್ ವಿಚಾರ ಈ ಸರ್ಕಾರದ ಅವಧಿಯಲ್ಲೂ ಮುನ್ನಲೆಗೆ ಬಂದಿದ್ದು, ಹಿಂದಿಗಿಂತ ಈಗ ಕಮಿಷನ್ ಪ್ರಮಾಣ ಹೆಚ್ಚಳವಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದೆ
ಬೆಂಗಳೂರು : ಕಳೆದ ಸರ್ಕಾರದ ಅವಧಿಯಲ್ಲಿ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದ್ದ 40 ಪರ್ಸೆಂಟ್ ಕಮಿಷನ್ ವಿಚಾರ ಈ ಸರ್ಕಾರದ ಅವಧಿಯಲ್ಲೂ ಮುನ್ನಲೆಗೆ ಬಂದಿದ್ದು, ಹಿಂದಿಗಿಂತ ಈಗ ಕಮಿಷನ್ ಪ್ರಮಾಣ ಹೆಚ್ಚಳವಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದೆ. ಈ ಕುರಿತು ರಾಜ್ಯಪಾಲರ ಜತೆಗೆ ಎಐಸಿಸಿ ನಾಯಕರಿಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ.
32 ಸಾವಿರ ಕೋಟಿ ರು. ಬಾಕಿ ಬಿಲ್ ಪಾವತಿ, ಕಮಿಷನ್ ದಂಧೆ ನಿಲ್ಲಿಸುವುದು ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಇದೇ ವೇಳೆ ಕಮಿಷನ್ ದಂಧೆ ವಿಚಾರ ಪ್ರಸ್ತಾಪಿಸಿದ್ದು, ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಕಳೆದ ಸರ್ಕಾರಕ್ಕಿಂತ ಹೆಚ್ಚಿನ ಕಮಿಷನ್: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘ ಬಿಲ್ ಪಾವತಿಗೆ 40 ಪರ್ಸೆಂಟ್ ಕಮಿಷನ್ ನೀಡಬೇಕಾದ ಅನಿವಾರ್ಯತೆಯಿದೆ ಎಂದು ಆರೋಪಿಸಿತ್ತು. ಈ ವಿಚಾರವನ್ನು ಕಾಂಗ್ರೆಸ್ ಚುನಾವಣಾ ಅಸ್ತ್ರವನ್ನಾಗಿಯೂ ಮಾಡಿಕೊಂಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್ ದಂಧೆಯಿದ್ದು, ಕಳೆದ ಸರ್ಕಾರಕ್ಕಿಂತ ಅದು ಹೆಚ್ಚಾಗಿದೆ ಎಂದು ಸಂಘ ನೇರವಾಗಿ ಆರೋಪಿಸಿದೆ.
ಸಿಎಂ-ಡಿಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ಈ ಸರ್ಕಾರದ ಅವಧಿಯಲ್ಲೂ ಕಮಿಷನ್ ಸಮಸ್ಯೆಯಿದೆ. ಅದರ ಬಗ್ಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಹಿಂದಿನ ಸರ್ಕಾರಕ್ಕಿಂತಲೂ ಈಗ ಕಮಿಷನ್ ಪ್ರಮಾಣ ಹೆಚ್ಚಿದ್ದು, ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳು ಹೆಚ್ಚಿನ ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರು, ಎಐಸಿಸಿ ನಾಯಕರಿಗೆ ದೂರು: ಬಿಲ್ ಪಾವತಿಗೆ ಕಮಿಷನ್ ಸಮಸ್ಯೆ ಕುರಿತಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ದೂರು ನೀಡಲು ರಾಜ್ಯ ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಅದರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಸಮಸ್ಯೆಯನ್ನು ಮನವರಿಕೆ ಮಾಡಲು ಚಿಂತನೆ ನಡೆಸಿದೆ. ಗುತ್ತಿಗೆದಾರರ ಬಿಲ್ ಪಾವತಿ ಸೇರಿ ಇತರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ, ಆ ಕುರಿತು ಎಐಸಿಸಿ ನಾಯಕರ ಗಮನಕ್ಕೆ ತರಲು ಸಂಘ ನಿರ್ಣಯಿಸಿದೆ.
ಅತಿಹೆಚ್ಚು ಬಿಲ್ ಬಾಕಿ ಉಳಿದಿರುವ ಇಲಾಖೆಗಳ ವಿವರ: (2024ರ ಡಿಸೆಂಬರ್ ಅಂತ್ಯಕ್ಕೆ)
ಇಲಾಖೆ ಬಾಕಿ ಬಿಲ್ ಮೊತ್ತ
ಜಲಸಂಪನ್ಮೂಲ 13 ಕೋಟಿ ರು.
ಲೋಕೋಪಯೋಗಿ 9 ಸಾವಿರ ಕೋಟಿ
ಸಣ್ಣ ನೀರಾವರಿ 3,800 ಕೋಟಿ ರು.
ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ 680 ಕೋಟಿ ರು.
ಗುತ್ತಿಗೆದಾರರ ಪ್ರಮುಖ ಬೇಡಿಕೆಗಳು
- ಏಪ್ರಿಲ್ ವೇಳೆಗೆ ಕನಿಷ್ಠ 15 ಸಾವಿರ ಕೋಟಿ ರು. ಪಾವತಿಸಬೇಕು
- ಬಿಲ್ ಪಾವತಿಗೆ ಇರುವ ಕಮಿಷನ್ ದಂಧೆ ಸ್ಥಗಿತಗೊಳಿಸಬೇಕು- ತ.ನಾಡು ಮಾದರಿ ಗುತ್ತಿಗೆದಾರರ ಜಿಎಸ್‌ಟಿ ಸಮಸ್ಯೆ ನಿವಾರಿಸಿ