ಮೈಕ್ರೋ ಫೈನಾನ್ಸ್‌ ಸೇರಿ 4 ವಿಧೇಯಕ ಅಂಗೀಕಾರ - ಅನಧಿಕೃತ ಫೈನಾನ್ಸ್‌ಗೆ 10 ವರ್ಷ ಜೈಲು

| N/A | Published : Mar 11 2025, 11:28 AM IST

Finance Horoscope 2025

ಸಾರಾಂಶ

‘ಕರ್ನಾಟಕ ಕಿರು ಸಾಲ (ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ-2025’ ಮತ್ತು ಇದಕ್ಕೆ ಪೂರಕವಾಗಿರುವ ಮೂರು ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

 ವಿಧಾನಸಭೆ : ಅನಧಿಕೃತ ಹಣಕಾಸು ಸಂಸ್ಥೆಗಳಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರು. ದಂಡ, ಕಪ್ಪುಹಣಕ್ಕೆ ಕಡಿವಾಣ, ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳಕ್ಕೆ ಕಡಿವಾಣ ಹಾಕುವ ‘ಕರ್ನಾಟಕ ಕಿರು ಸಾಲ (ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ-2025’ ಮತ್ತು ಇದಕ್ಕೆ ಪೂರಕವಾಗಿರುವ ಮೂರು ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕಿರು ಸಾಲ, ಸಣ್ಣ ಸಾಲ, ಖಾಸಗಿ ಹಣಕಾಸುದಾರರಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ. ಅಲ್ಲದೆ, ಕೋ-ಆಪರೇಟಿವ್‌ ಸೊಸೈಟಿ, ಸೌಹಾರ್ದ ಬ್ಯಾಂಕ್‌ ಗಳನ್ನು ಸಹ ವಿಧೇಯಕಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು. ಬಳಿಕ, ‘ಕರ್ನಾಟಕ ಕಿರು ಸಾಲ (ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ-2025ಕ್ಕೆ ಅನುಮೋದನೆ ನೀಡಲಾಯಿತು.

ಮೈಕ್ರೋ ಫೈನಾನ್ಸ್‌ಗೆ ಪೂರಕ ವಿಧೇಯಕ ಅಂಗೀಕಾರ:

ಮೈಕ್ರೋ ಫೈನಾನ್ಸ್ ವಿಧೇಯಕಕ್ಕೆ ಪೂರಕವಾಗಿರುವ ಕರ್ನಾಟಕ ಗಿರವಿದಾರರ (ತಿದ್ದುಪಡಿ) ವಿಧೇಯಕ, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ವಿಧೇಯಕ, ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕವನ್ನು ಕೂಡ ಅಂಗೀಕರಿಸಲಾಯಿತು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ವಿಧೇಯಕಗಳ ಕುರಿತು ವಿವರಿಸಿ ಸದನದ ಅನುಮೋದನೆ ಪಡೆದರು. ಗಿರವಿದಾರರ ಪರವಾನಗಿಯನ್ನು ಐದು ವರ್ಷದಿಂದ ಎರಡು ವರ್ಷಗಳಿಗೆ ಇಳಿಕೆ ಮಾಡುವ, 500 ರು. ದಂಡದ ಬದಲು ಐದು ಲಕ್ಷ ರು. ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ವೇಳೆ, ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಸವದಿ ಮಾತನಾಡಿ, ಪರವಾನಗಿಯನ್ನು ಎರಡು ವರ್ಷದ ಬದಲು ಮೂರು ವರ್ಷ ಮಾಡಬೇಕೆಂದು ಸಲಹೆ ನೀಡಿದರು. ಇದನ್ನು ಒಪ್ಪಿದ ಸಚಿವರು ಮೂರು ವರ್ಷವೆಂದು ಬದಲಿಸುವುದಾಗಿ ತಿಳಿಸಿದರು.