ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ

| N/A | Published : Aug 23 2025, 10:24 AM IST

Myosre Sandal Soap Founder

ಸಾರಾಂಶ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ತಯಾರಿಸುತ್ತಿರುವ ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತು ಮತ್ತು ಪ್ರಚಾರಕ್ಕೆ ಕಳೆದ ಎರಡು ವರ್ಷಗಳಲ್ಲಿ ₹48.88 ಕೋಟಿ ವೆಚ್ಚ ಮಾಡಿದೆ

 ವಿಧಾನಸಭೆ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ತಯಾರಿಸುತ್ತಿರುವ ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತು ಮತ್ತು ಪ್ರಚಾರಕ್ಕೆ ಕಳೆದ ಎರಡು ವರ್ಷಗಳಲ್ಲಿ ₹48.88 ಕೋಟಿ ವೆಚ್ಚ ಮಾಡಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.  

ಬಿಜೆಪಿ ಸದಸ್ಯ ಸುನೀಲ್‌ ಕುಮಾರ್‌ ಅವರ ಪ್ರಶ್ನೆಗೆ ಶುಕ್ರವಾರ ಸದನದಲ್ಲಿ ಲಿಖಿತ ಉತ್ತರ ಮಂಡಿಸಿರುವ ಅವರು, ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ಸರ್ಕಾರದಿಂದ ಯಾವುದೇ ಹಣ ಖರ್ಚು ಮಾಡಿಲ್ಲ. ಕೆಎಸ್‌ಡಿಎಲ್‌ನಿಂದಲೇ ಎರಡು ವರ್ಷದಲ್ಲಿ ₹48.88 ಕೋಟಿ ವೆಚ್ಚ ಮಾಡಲಾಗಿದೆ. ಜಾಹೀರಾತು ಮತ್ತು ಪ್ರಚಾರಕ್ಕೆ 2025ರಿಂದ 27ರ ವರೆಗೆ ಬಹುಭಾಷಾ ನಟಿ ತಮ್ಮನ್ನಾ ಭಾಟಿಯಾ ಮತ್ತು ನಟಿ ಐಶಾನಿ ಶೆಟ್ಟಿ ಅವರನ್ನು ರಾಯಭಾರಿಗಳನ್ನಾಗಿ ಬಳಸಿಕೊಂಡಿದ್ದು, ಇವರಿಗೆ ಕ್ರಮವಾಗಿ ₹6.20 ಕೋಟಿ ಮತ್ತು ₹15 ಲಕ್ಷ ಸಂಭಾವನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೆ, ಸಂಸ್ಥೆ ಕರ್ನಾಟಕ ಮೂಲದ ಸ್ಥಳೀಯ ವ್ಯಕ್ತಿಗಳಾದ ನಿಮಿಕಾ ರತ್ನಾಕರ್‌, ಶ್ರೀನಿವಾಸ್‌ ಮೂರ್ತಿ, ಸಾನ್ಯಾ ಐಯ್ಯರ್‌, ಆರಾಧನಾ ಆರ್‌. ಅವರನ್ನು ದೂರದರ್ಶನ ಜಾಹೀರಾತುಗಳಲ್ಲಿ ಚಿತ್ರೀಕರಣ ಹಾಗೂ ಡಿಜಿಟಲ್‌ ಮಾಧ್ಯಮಗಳ ರೀಲ್ಸ್‌ನಲ್ಲಿ ಬಳಸಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ₹62.87 ಲಕ್ಷ ವೆಚ್ಚ ತಗುಲಿದೆ. ರಾಯಭಾರಿಗಳು ಹೊಂದಿರುವ ಜನಪ್ರಿಯತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೊಂದಿರುವ ಅನುಯಾಯಿಗಳ ಆಧಾರದ ಮೇಲೆ ಉನ್ನತಾಧಿಕಾರಿಗಳ ಸಮಿತಿ ನೀಡಿದ ಶಿಫಾರಸಿನ ಅನ್ವಯ ಬ್ರಾಂಡ್‌ ಅಂಬಾಸಿಡರ್‌ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ವಿವರಿಸಿದ್ದಾರೆ.

Read more Articles on