‘ಮುಂದಿನ ದಿನಗಳಲ್ಲಿ ಕನ್ನಡಿಗರೇ ಸ್ಯಾಂಡಲ್‌ ಸೋಪ್‌ ರಾಯಭಾರಿ'

| N/A | Published : May 26 2025, 10:55 AM IST

Mysore Sandal Brand Ambassdor Tamannaah

ಸಾರಾಂಶ

ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ಮುಂದಿನ ದಿನಗಳಲ್ಲಿ ಶೇ.99 ಕನ್ನಡಿಗರಿಗೇ ಆದ್ಯತೆ ನೀಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

 ಮೈಸೂರು : ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ಮುಂದಿನ ದಿನಗಳಲ್ಲಿ ಶೇ.99 ಕನ್ನಡಿಗರಿಗೇ ಆದ್ಯತೆ ನೀಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡಿಗರಿಗೂ ಆದ್ಯತೆ ಕೊಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಶೇ.99 ಕನ್ನಡಿಗರಿಗೇ ಆದ್ಯತೆ ನೀಡುತ್ತೇವೆ ಎಂದರು.

ಬಹಳಷ್ಟು ಜನರ ಪರ-ವಿರೋಧ ಇದ್ದೇ ಇರುತ್ತದೆ. ಕೆಲವರು ಕನ್ನಡಿಗರನ್ನು ನೇಮಕ ಮಾಡಬೇಕು ಅಂತಾರೆ, ಕೆಲವರು ಬೇಡ ಅಂತಾರೆ. ಸರ್ಕಾರ ಒಳ್ಳೆಯ ಉದ್ದೇಶಕ್ಕೆ ನಿರ್ಧಾರ ಕೈಗೊಂಡಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮನ್ನಣೆ ಗಳಿಸಿದೆ. ಇದರ ಉತ್ಪಾದನೆ ಎಲ್ಲರಿಗೂ ಮುಟ್ಟಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅನಧಿಕೃತ ರೆಸಾರ್ಟ್‌ಗಳ ಮೇಲೆ ಕ್ರಮ:

ಅನಧಿಕೃತ ರೆಸಾರ್ಟ್‌ಗಳು, ನಿಯಮ ಪಾಲನೆ ಮಾಡದ ರೆಸಾರ್ಟ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅರಣ್ಯ ಪ್ರದೇಶದಲ್ಲಿ ಯಾವುದೇ ಅನಧಿಕೃತ ರೆಸಾರ್ಟ್‌ಗಳು ಇಲ್ಲ. ಅರಣ್ಯ ಪ್ರದೇಶದ ಸುತ್ತಮುತ್ತ ಇವೆ. ಅರಣ್ಯದ ಒಳಗೆ ಯಾವುದೇ ರೆಸಾರ್ಟ್‌ಗಳು ಅತಿಕ್ರಮವಾಗಿ ತಲೆ ಎತ್ತುತ್ತಿವೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮಾನವ-ಪ್ರಾಣಿಗಳ ನಡುವಿನ ಸಂಘರ್ಷ ಇವತ್ತಿನದಲ್ಲ. ಅನಾದಿ ಕಾಲದಿಂದಲೂ ಇದೆ. ಮಾನವ-ಪ್ರಾಣಿಗಳ ನಡುವಿನ ಸಂಘರ್ಷ ತಡೆಗಟ್ಟಬೇಕಿದೆ. ಹೀಗಾಗಿ, ಆನೆಗಣತಿ ಆರಂಭ ಆಗಿದೆ. ಕೆಲ ಪುಂಡಾನೆಗಳಿಂದ ಮನುಷ್ಯರ ಮೇಲೆ ದಾಳಿ ಆಗುತ್ತಿದೆ. ಕಾಡಾನೆಗಳು ನಾಡಿನತ್ತ ಆಗಮಿಸುತ್ತಿವೆ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತಡೆಯಲಿಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

ತಮನ್ನಾ ಬದಲು ರಾಜ್ಯದವರಿಗೇ ಅವಕಾಶ ಕೊಡಬೇಕಿತ್ತು: ಜಮೀರ್‌ 

ಮೈಸೂರು ಸ್ಯಾಂಡಲ್ ಸೋಪ್ಸ್ ಜಾಹೀರಾತಿಗೆ ನಮ್ಮ ರಾಜ್ಯದ ನಟಿಯರಿಗೆ ಅವಕಾಶ ನೀಡಬೇಕಿತ್ತು ಅನಿಸುತ್ತಿದೆ ಎಂದು ವಕ್ಫ್‌ ಖಾತೆ ಸಚಿವ, ಕಾಂಗ್ರೆಸ್‌ ನಾಯಕ ಜಮೀರ್‌ ಅಹಮದ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮನ್ನಾ ಬದಲು, ಸ್ಥಳೀಯರಿಗೆ ಅವಕಾಶ ಕೊಡಬೇಕಿತ್ತು ಎಂದು ಹೇಳಿದರು.

ಕರ್ನಾಟಕವನ್ನು ಹೊರತುಪಡಿಸಿ, ಆಚೆಯವರನ್ನು ಕರೆದುಕೊಂಡು ಬರುವ ಬದಲು, ನಮ್ಮ ರಾಜ್ಯದ ನಟಿಯರು, ಕಲಾವಿದರಿಗೆ ಅವಕಾಶ ನೀಡಬೇಕಿತ್ತು. ಕನ್ನಡದಲ್ಲಿ ಬಹಳಷ್ಟು ಪ್ರತಿಭಾವಂತ ನಟಿಯರು ಇದ್ದಾರೆ.ಇಲ್ಲಿನ ನಟಿಯರಿಗೆ ಅವಕಾಶ ನೀಡಬೇಕಿತ್ತು ಎಂಬುದು ನನ್ನ ಅಭಿಪ್ರಾಯ ಎನ್ನುವ ಮೂಲಕ ಮೈಸೂರು ಸ್ಯಾಂಡರ್ ಸೋಪ್ಸ್‌ ಉತ್ಪನ್ನಗಳಿಗೆ ನಟಿ ತಮನ್ನಾ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಸಚಿವ ಜಮೀರ್‌ ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಈಗ ಆ ವಿಚಾರ ಅಪ್ತಸ್ತುತ ಎಂದು ಹೇಳಿದರು.

ತಮನ್ನಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆ ಮಾಡಲು ನೀವೇ ಮಧ್ಯಸ್ಥಿಕೆ ವಹಿಸಿದ್ದೀರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್, ‘ಆ ಸಂದರ್ಭದಲ್ಲಿ ವಿಜಯೇಂದ್ರ ಅವರು ಎಲ್ಲೋ ನಮ್ಮ ಜೊತೆಯಲ್ಲಿ ಬಂದಿರಬಹುದು, ಅದಕ್ಕೆ ಹಾಗೆ ಹೇಳಿದ್ದಾರೆʼ ಎಂದು ಉತ್ತರಿಸಿದರು.

Read more Articles on