ಪಿಡಿಒ ಪರೀಕ್ಷೆ, ಶೇ.52.3ರಷ್ಟು ಹಾಜರಾತಿ : 4 ನಿಮಿಷ ತಡವಾಗಿ ಬಂದಿದ್ದಕ್ಕೆ ಕೈತಪ್ಪಿತು ಪರೀಕ್ಷೆ ಅವಕಾಶ!

| Published : Dec 09 2024, 09:31 AM IST

Rajasthan Animal Attendant Exam 2024
ಪಿಡಿಒ ಪರೀಕ್ಷೆ, ಶೇ.52.3ರಷ್ಟು ಹಾಜರಾತಿ : 4 ನಿಮಿಷ ತಡವಾಗಿ ಬಂದಿದ್ದಕ್ಕೆ ಕೈತಪ್ಪಿತು ಪರೀಕ್ಷೆ ಅವಕಾಶ!
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಶೇ.52.3ರಷ್ಟು ಹಾಜರಾತಿ ಇತ್ತು ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

ಬೆಂಗಳೂರು  :  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಶೇ.52.3ರಷ್ಟು ಹಾಜರಾತಿ ಇತ್ತು ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಯಾವುದೇ ಗಂಭೀರ ಘಟನೆಗಳು ವರದಿಯಾಗಿಲ್ಲ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತುಂಬು ತೋಳಿನ ವಸ್ತ್ರ ಧರಿಸದಂತೆ ಹಾಲ್‌ ಟಿಕೆಟ್‌ನಲ್ಲೇ ಸೂಚನೆ ನೀಡಲಾಗಿದೆ. ಆದರೂ ಕೆಲ ಕಡೆ ತುಂಬು ತೋಳಿನ ದಿರಿಸು ಧರಿಸಿ ಬಂದಿದ್ದ ಕಾರಣ ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಂದಿಗೆ ಸಣ್ಣ ಪುಟ್ಟ ವಾಗ್ವಾದ ನಡೆದಿವೆ ಎಂದು ಕೆಪಿಎಸ್‌ಸಿ ತಿಳಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ 3,86,099 ಅಭ್ಯರ್ಥಿಗಳ ನೋಂದಣಿ ಮಾಡಿಕೊಂಡಿದ್ದರು. ಬೆಳಗಿನ ಪತ್ರಿಕೆಗೆ ಶೇ.52.5ರಷ್ಟು ಹಾಜರಾತಿ ಹಾಗೂ ಮಧ್ಯಾಹ್ನದ ಪತ್ರಿಕೆಗೆ ಶೇ.52.3ರಷ್ಟು ಹಾಜರಾತಿ ಇತ್ತು.

ಕಲಬುರಗಿ : ನಗರದ ಬೀಬೀ ರಜಾ ಹೈಸ್ಕೂಲ್‌ ಕೇಂದ್ರದಲ್ಲಿ ಭಾನುವಾರ ನಡೆದ ಕೆಪಿಎಸ್‌ಸಿಯ ಪಿಡಿಒ ಪರೀಕ್ಷೆ ಬರೆಯಲು ಮಹಿಳಾ ಅಭ್ಯರ್ಥಿಯೊಬ್ಬರು 4 ನಿಮಿಷ ತಡವಾಗಿ ಬಂದಿದ್ದರು. ಅಷ್ಟರಲ್ಲೇ ಪರೀಕ್ಷಾ ಕೇಂದ್ರದ ಬಾಗಿಲು ಹಾಕಲಾಗಿತ್ತು. ಹೀಗಾಗಿ, ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕೈತಪ್ಪಿತು.

ಅಫಜಲ್ಪುರ ತಾಲೂಕಿನ ನಿಲೂರ ಗ್ರಾಮದ ಮಹಿಳೆಗೆ 4 ನಿಮಿಷ ತಡವಾಗಿ ಬಂದಿದ್ದಾರೆಂದು ಗೇಟ್ ತೆರೆಯಲು ಕೇಂದ್ರದ ಪ್ರಮುಖರು, ಸಿಬ್ಬಂದಿ ನಿರಾಕರಿಸಿದರು. ಮಹಿಳೆ ಕಣ್ಣಿರಿಡುತ್ತಾ ಅವಕಾಶಕ್ಕಾಗಿ ಗೋಳಾಡುತ್ತಾ ತುಂಬ ಹೊತ್ತು ಗೇಟ್‌ ಬಳಿ ಕಾಯ್ದರಾದರೂ ಗೇಟ್‌ ತೆರೆಯಲೇ ಇಲ್ಲ.

ಪರೀಕ್ಷಾ ಕೇಂದ್ರಗಳನ್ನು ಬೀಬೀ ರಜಾ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳಲ್ಲಿ ಆಯೋಜಿಸಲಾಗಿತ್ತು. ವಿಳಾಸ ಸರಿಯಾಗಿ ಗೊತ್ತಾಗದೆ ಪರೀಕ್ಷಾರ್ಥಿಗಳು ಪರದಾಡುವಂತಾಯಿತು. ಅನೇಕರು ಬಸ್‌, ರೈಲು ನಿಲ್ದಾಣದಿಂದ ಆಟೋದಲ್ಲಿ ನಗರ ಸುತ್ತಿ ಸೆಂಟರ್‌ಗೆ ಬರುವಂತಾಯಿತು. ಆಟೋದವರು ಈ ವೇಳೆ ಹೆಚ್ಚಿನ ಹಣ ವಸೂಲಿ ಮಾಡಿದರು ಎಂದು ಪರೀಕ್ಷಾರ್ಥಿಗಳು ದೂರಿದ್ದಾರೆ.