ಸಾರಾಂಶ
ಬಿಬಿಎಂಪಿಯು 2024-25ನೇ ಸಾಲಿನ ಆರ್ಥಿಕ ವರ್ಷ ಮುಗಿಯಲು ಇನ್ನೂ ಎರಡೂವರೆ ತಿಂಗಳು ಬಾಕಿ ಇರುವ ಮುನ್ನವೇ ಶೇ.83 ರಷ್ಟು ಆಸ್ತಿ ತೆರಿಗೆ ವಸೂಲಿ ಮಾಡಿದೆ.
ಬೆಂಗಳೂರು : ಬಿಬಿಎಂಪಿಯು 2024-25ನೇ ಸಾಲಿನ ಆರ್ಥಿಕ ವರ್ಷ ಮುಗಿಯಲು ಇನ್ನೂ ಎರಡೂವರೆ ತಿಂಗಳು ಬಾಕಿ ಇರುವ ಮುನ್ನವೇ ಶೇ.83 ರಷ್ಟು ಆಸ್ತಿ ತೆರಿಗೆ ವಸೂಲಿ ಮಾಡಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 5210 ಕೋಟಿ ರು. ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಹೊಂದಿದ್ದ ಬಿಬಿಎಂಪಿ 4370 ಕೋಟಿ ರು. ಆಸ್ತಿ ತೆರಿಗೆ ವಸೂಲಿ ಮಾಡುವ ಮೂಲಕ ಶೇ.83 ರಷ್ಟು ಗುರಿ ಸಾಧಿಸಿದೆ. ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಜಾರಿಗೆ ತಂದ ಒಟಿಎಸ್ ಯೋಜನೆ ಕಳೆದ ನವೆಂಬರ್ ಅಂತ್ಯಕ್ಕೆ ಕೊನೆಗೊಂಡಿತ್ತು. ಇದೀಗ ಪ್ರತಿವಾರಕ್ಕೆ ಸುಮಾರು 10 ರಿಂದ 13 ಕೋಟಿ ರು. ವರೆಗೆ ವಸೂಲಿಯಾಗುತ್ತಿದೆ.
ಆಸ್ತಿ ತೆರಿಗೆ ವಸೂಲಿಗೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಪ್ರತಿ ವಾರ ಸಂಗ್ರಹಿಸಬಹುದಾದ ತೆರಿಗೆ ಮೊತ್ತದ ಗುರಿ ನೀಡಲಾಗುತ್ತಿದೆ. ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ವಾಣಿಜ್ಯ ಕಟ್ಟಡಗಳನ್ನು ಸೀಜ್ ಮಾಡಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಕನಿಷ್ಠ 500 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷಕ್ಕಿಂತ ₹900 ಕೋಟಿ ಅಧಿಕ ಸಂಗ್ರಹ:
ಕಳೆದ ವರ್ಷ ಇದೇ ವೇಳೆ ಬಿಬಿಎಂಪಿಯು 3,480 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸಿತ್ತು. ಈ ಬಾರಿ 4,370 ಕೋಟಿ ರು. ಸಂಗ್ರಹಿಸುವ ಮೂಲಕ ಸುಮಾರು 900 ಕೋಟಿ ರು.ಗೂ ಅಧಿಕ ಮೊತ್ತವನ್ನು ವಸೂಲಿ ಮಾಡಿದೆ.
ಆಸ್ತಿ ತೆರಿಗೆ ಸಂಗ್ರಹ ವಿವರ
ವಲಯ ಸಂಗ್ರಹ ಮೊತ್ತ(ಕೋಟಿ ರು) ಗುರಿ ಸಾಧನೆ (ಶೇ)
ಪಶ್ಚಿಮ 494 80.94
ದಕ್ಷಿಣ 631 82.12
ಬೊಮ್ಮನಹಳ್ಳಿ 432 73.84
ಆರ್‌ಆರ್‌ನಗರ 345 79.49
ಪೂರ್ವ 735 82.41
ಮಹದೇವಪುರ 1,169 89.36
ದಾಸರಹಳ್ಳಿ 139 84.87
ಯಲಹಂಕ 422 94.95
ಒಟ್ಟು 4,370 83.89