ಸಾರಾಂಶ
ಮೂಲ ಗಣಿತ ಕಲಿಕೆಗೆ ‘ಚಿಲಿ-ಪಿಲಿ’ ಕಾರ್ಯಕ್ರಮ, ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ‘ಮರು ಸಿಂಚನ’, ‘ಗಣಿತ-ಗಣಕ’ ವಿಶೇಷ ತರಗತಿ. ಈ ಮೂರೂ ಕಾರ್ಯಕ್ರಮಗಳ ಜಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜೆ-ಪಾಲ್ ಸೌತ್ ಏಷ್ಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಮೂಲ ಗಣಿತ ಕಲಿಕೆಗೆ ‘ಚಿಲಿ-ಪಿಲಿ’ ಕಾರ್ಯಕ್ರಮ, 6 ರಿಂದ 8ನೇ ತರಗತಿ ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ‘ಮರು ಸಿಂಚನ’, 3 ರಿಂದ 8 ನೇ ತರಗತಿ ಮಕ್ಕಳಿಗೆ ವಾರಕ್ಕೊಮ್ಮೆ ಮೊಬೈಲ್ ಫೋನ್ ಮೂಲಕ ‘ಗಣಿತ-ಗಣಕ’ ವಿಶೇಷ ತರಗತಿ. ಈ ಮೂರೂ ಕಾರ್ಯಕ್ರಮಗಳ ಜಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜೆ-ಪಾಲ್ ಸೌತ್ ಏಷ್ಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಮೊದಲ ಹಂತದಲ್ಲಿ ರಾಜ್ಯದ 93 ಬ್ಲಾಕ್‌ಗಳ 9 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಕಾರ್ಯಕ್ರಮಗಳು ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ಶಾಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸಚಿವರ ಸಮ್ಮುಖದಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮತ್ತು ಜೆ-ಪಾಲ್‌ನ ಗ್ಲೋಬಲ್ ಕಾರ್ಯನಿರ್ವಾಹಕ ನಿರ್ದೇಶಕ ಇಕ್ಬಾಲ್ ಧಲಿವಾಲ್ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.
ಬಳಿಕ ಮಾತನಾಡಿದ ಸಚಿವರು, ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಚಿಲಿ-ಪಿಲಿ ಕಾರ್ಯಕ್ರಮ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಚಟುವಟಿಕೆ ಆಧಾರಿತವಾಗಿ ಗಣಿತ ಕಲಿಸುವ ಕಾರ್ಯಕ್ರಮವಾಗಿದೆ. ಮಕ್ಕಳು ಗಣಿತಕ್ಕೆ ಸಂಬಂಧಿಸಿದ ಉಪಕರಣಗಳೊಂದಿಗೆ ಆಟವಾಡುತ್ತಲೇ ಗಣಿತ ಕಲಿಯುತ್ತಾರೆ. ಅದೇ ರೀತಿ ಮರು ಸಿಂಚನ ಕಲಿಕೆಯಲ್ಲಿ ಹಿಂದುಳಿದ 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಸುಧಾರಿಸಲು ರೂಪಿಸಿರುವ ಕಾರ್ಯಕ್ರಮ. ಮುಂದಿನ ತರಗತಿಯ ಪಾಠಗಳು ಅರ್ಥವಾಗಲು ಹಿಂದಿನ ತರಗತಿಯ ಪಾಠಗಳು ನೆನಪಿರುವ ಅಗತ್ಯವಿರುತ್ತದೆ. ಆದರೆ, ಕಲಿಕೆಯಲ್ಲಿ ಚುರುಕಾಗಿರುವ, ಜ್ಞಾಪಕ ಶಕ್ತಿ ಉತ್ತಮವಾಗಿರುವ ಮಕ್ಕಳಿಗೆ ಅದು ನೆನಪಿರುತ್ತದೆ. ಕಲಿಕೆಯಲ್ಲಿ ಹಿಂದುಳಿದಿರುವವರಿಗೆ ಕಷ್ಟ. ಅಂತಹವರಿಗೆ ಹಿಂದಿನ ಪಾಠಗಳನ್ನು ಪುನರ್‌ಮನನ ಮಾಡಿ ಮುಂದಿನ ತರಗತಿ ಪಾಠ ಅರ್ಥವಾಗುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ವಿವರಿಸಿದರು.
ಇನ್ನು, ಗಣಿತ-ಗಣಕ 3ರಿಂದ 5ನೇ ತರಗತಿ ಮಕ್ಕಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಮೂಡಿಸಲು ಸಾಮರ್ಥ್ಯ ಹೆಚ್ಚಿಸಲು ರೂಪಿಸಿರುವ ಕಾರ್ಯಕ್ರಮ. ಇಲ್ಲಿ ಶಿಕ್ಷಕರು ವಾರಕ್ಕೊಮ್ಮೆ ಕನಿಷ್ಠ 45 ನಿಮಿಷಗಳ ಕಾಲ ಮೊಬೈಲ್ ಫೋನ್ ಮೂಲಕ ವಿದ್ಯಾರ್ಥಿಗಳಿಗೆ ಟ್ಯೂಷನ್ ಅಥವಾ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳ ಬಳಿ ಫೋನ್ ಇಲ್ಲದಿದ್ದಲ್ಲಿ ಪೋಷಕರ ಮೊಬೈಲ್‌ಗೆ ಕರೆ ಮಾಡಿ ತರಗತಿ ನಡೆಸುತ್ತಾರೆ. ಈಗಾಗಲೇ ಸೊರಬ ತಾಲ್ಲೂಕಿನಲ್ಲಿ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ನಡೆಸಲಾಗಿದ್ದು ಉತ್ತಮ ಸ್ಪಂದನೆ ಸಿಕ್ಕಿದೆ. ಇಂತಹ ಕಾರ್ಯಕ್ರಮಗಳಿಂದ ಸರ್ಕಾರಿ ಶಾಲೆಗಳಲ್ಲೂ ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎನ್ನುವು ಪರಿಕಲ್ಪನೆ ಪೋಷಕರಲ್ಲೂ ಮೂಡಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮಗಳನ್ನು ಜೆ-ಪಾಲ್ ಸಂಸ್ಥೆ ಉಚಿತವಾಗಿ ನೀಡಲಿದೆ. ಶಿಕ್ಷಕರಿಗೆ ತರಬೇತಿ, ಅಗತ್ಯ ತಾಂತ್ರಿಕ ನೆರವು, ಉಪಕರಣ ಸೇರಿದಂತೆ ಇತರೆ ಕಾರ್ಯಗಳನ್ನು ಸಂಸ್ಥೆ ಒದಗಿಸಿಕೊಡಲಿದೆ. ಈ ಕಾರ್ಯಕ್ರಮಗಳ ಪಠ್ಯಕ್ರಮ ಮುದ್ರಣಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಬರಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಜೆ-ಪಾಲ್ ಕಾಮಗಾರಿಯನ್ನು ಉಚಿತವಾಗಿ ಮಾಡುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ವೇಳೆ ಜೆ-ಪಾಲ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.