ಮೈಕ್ರೋಫೈನಾನ್ಸ್‌ಗೆ ಶೀಘ್ರ ಮೂಗುದಾರ - ಕಂಪನಿಗಳ ಕಿರುಕುಳ ತಡೆಗೆ ನಾಳೆ ಸಿಎಂ ಮಹತ್ವದ ಸಭೆ

| Published : Jan 24 2025, 08:00 AM IST

Siddaramaiah

ಸಾರಾಂಶ

ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ಜನರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ.

 ಬೆಂಗಳೂರು : ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ಜನರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ.

ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ಸಾಲ ಪಡೆದು ನಂತರ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರ ನಡುವೆಯೇ ಹಾವೇರಿ ಮಹಿಳೆಯರು ಮಾಂಗಲ್ಯ ಉಳಿಸಿ ಅಭಿಯಾನ ಆರಂಭಿಸಿ ಮುಖ್ಯಮಂತ್ರಿಗಳಿಗೆ ಮಾಂಗಲ್ಯದ ಸರವನ್ನು ಕಳುಹಿಸಿದ್ದರು. ಹೀಗಾಗಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ಹೆಚ್ಚುತ್ತಿರುವುದನ್ನು ಮನಗಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶನಿವಾರ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಡಾ. ಜಿ.ಪರಮೇಶ್ವರ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಪಾಲ್ಗೊಳ್ಳಲಿದ್ದಾರೆ. ಜತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಚಾಮರಾಜನಗರ, ರಾಮನಗರ ಹಾಗೂ ನಂಜನಗೂಡಿನ ಕೆಲವೆಡೆ ಮೈಕ್ರೋಫೈನಾನ್ಸ್‌ ಕಂಪನಿಗಳ ಕಿರುಕುಳ ತಾಳಲಾರದೆ ಜನರು ಊರು ಬಿಟ್ಟು ಹೋಗಿದ್ದ ವರದಿಗಳು ಭಾರಿ ಚರ್ಚೆಗೆ ಕಾರಣವಾಗಿದ್ದವು.

-ಮೂಗುದಾರ ಏಕೆ?

ಹೆಚ್ಚಿನ ಬಡ್ಡಿ ದರವಿದ್ದರೂ ಸುಲಭವಾಗಿ ಸಾಲ ಸಿಗುತ್ತದೆ ಎಂದು ಮೈಕ್ರೋಫೈನಾನ್ಸ್‌ಗಳಿಂದ ಸಾಲ ಪಡೆಯುತ್ತಿರುವ ಜನ

ಸಾಲ ಪಾವತಿ ವಿಳಂಬವಾದರೆ ಸಾಲಗಾರರಿಗೆ ಮೈಕ್ರೋಫೈನಾನ್ಸ್‌ ಸಿಬ್ಬಂದಿಯಿಂದ ಅವಾಚ್ಯ ಪದದಲ್ಲಿ ಬೈಗುಳ, ಬೆದರಿಕೆ

ಇದಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿರುವ,ಮನೆ, ಗ್ರಾಮ ಬಿಡುತ್ತಿರುವ ಪ್ರಕರಣಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳಕಿಗೆ

ಈ ಹಿನ್ನೆಲೆಯಲ್ಲಿ ಮೈಕ್ರೋಫೈನಾನ್ಸ್‌ಗಳ ಕಿರುಕುಳ ತಡೆಯಲು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಗೆ ಸಿಎಂ ಸಭೆ

ಮೈಕ್ರೋ ಫೈನಾನ್ ಕಡಿವಾಣಕ್ಕೆ ಶೀಘ್ರ ನೂತನ ಕಾಯ್ದೆ: ಎಚ್‌ಕೆಪಿ

  ಗದಗ : ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಂಧೆ ಹಾಗೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ನೂತನ ಕಾಯ್ದೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಖಾತೆ ಸಚಿವ ಎಚ್.ಕೆ.ಪಾಟೀಲ್‌ ತಿಳಿಸಿದ್ದಾರೆ.

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಹೆಚ್ಚಾಗಿ ಆತ್ಮಹತ್ಯೆ ಪ್ರಕರಣ ಹೆಚ್ಚಳ, ಗ್ರಾಮೀಣ ಭಾಗದ ಜನತೆ ಮನೆ, ಗ್ರಾಮಗಳನ್ನೇ ತೊರೆಯುತ್ತಿರುವ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಸರ್ಕಾರ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಎಚ್‌.ಕೆ.ಪಾಟೀಲ್‌, ‘ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಂಧೆ ಹಾಗೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ಮುಂದಿನ ಅಧಿವೇಶನದಲ್ಲಿಯೇ ವಿಧೇಯಕ ಮಂಡಿಸಲಾಗುವುದು. ಬಡವರ ಮಧ್ಯಮ ವರ್ಗದವರ ಶೋಷಣೆ ತಡೆಗಟ್ಟುವುದು ಹಾಗೂ ಅವರನ್ನು ಸಂರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯ’ ಎಂದು ಹೇಳಿದರು.

ಜೊತೆಗೆ, ‘ಈಗ ಮೈಕ್ರೋ ಫೈನಾನ್ಸ್ ಬಗ್ಗೆ ಆರ್‌ಬಿಐ ವ್ಯಾಪ್ತಿಯಲ್ಲಿ ದೂರು ನೀಡಲು ಇರುವ ಸಂಸ್ಥೆಗಳನ್ನು ಗುರುತಿಸಬೇಕಿದೆ. ಮೀಟರ್‌ ಬಡ್ಡಿ, ಆರ್ಥಿಕವಾಗಿ ಜನರ ಶೋಷಣೆ ಮಾಡಿದರೆ ಸರ್ಕಾರ ಸಹಿಸುವದಿಲ್ಲ. ಅನ್ಯಾಯವಾಗಿ ಬಡ್ಡಿ ಹಾಕಿದ್ದಲ್ಲಿ ಯಾವುದೇ ಕಾರಣಕ್ಕೂ ಸುಮ್ಮನೆ ಕುಳಿತುಕೊಳ್ಳದೇ ದೂರು ನೀಡಬೇಕು ಎಂದು ಹೇಳಿದರು.