ಸಾರಾಂಶ
ಹವ್ಯಕ ಸಮಾಜ ದೇಶದ ಬಗ್ಗೆ ಹಿತಚಿಂತನೆ ಮಾಡುತ್ತಿರುವ ಶಿಸ್ತುಬದ್ಧ, ಬುದ್ಧಿವಂತ ಹಾಗೂ ಜಾಗೃತ ಸಮಾಜ. ಕೇವಲ ಐದು ಲಕ್ಷ ಜನಸಂಖ್ಯೆ ಇರುವ ಅತ್ಯಂತ ಚಿಕ್ಕ ಸಮಾಜವಾಗಿದ್ದರೂ ದೇಶವೇ ಮೆಚ್ಚುವಂಥ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶ್ಲಾಘಿಸಿದರು.
ಬೆಂಗಳೂರು : ಹವ್ಯಕ ಸಮಾಜ ದೇಶದ ಬಗ್ಗೆ ಹಿತಚಿಂತನೆ ಮಾಡುತ್ತಿರುವ ಶಿಸ್ತುಬದ್ಧ, ಬುದ್ಧಿವಂತ ಹಾಗೂ ಜಾಗೃತ ಸಮಾಜ. ಕೇವಲ ಐದು ಲಕ್ಷ ಜನಸಂಖ್ಯೆ ಇರುವ ಅತ್ಯಂತ ಚಿಕ್ಕ ಸಮಾಜವಾಗಿದ್ದರೂ ದೇಶವೇ ಮೆಚ್ಚುವಂಥ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶ್ಲಾಘಿಸಿದರು.
ಶ್ರೀ ಅಖಿಲ ಹವ್ಯಕ ಮಹಾಸಭಾ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನವಾದ ಶನಿವಾರ ‘ಸಾಕ್ಷಾತ್ಕಾರ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಹವ್ಯಕ ಸಮಾಜದ ಸ್ವಾಮೀಜಿಗಳು ದೇಶಕ್ಕೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ. ಆಧುನಿಕ ಕಾಲಘಟ್ಟದಲ್ಲೂ ತನ್ನ ಪರಂಪರೆ ಉಳಿಸಿಕೊಂಡು ಸಮುದಾಯವನ್ನು ಒಗ್ಗೂಡಿಸುತ್ತಾ ಸಂಸ್ಕೃತಿ ಬೆಳವಣಿಗೆಗೆ ವಿಭಿನ್ನವಾಗಿ ಶ್ರಮಿಸುತ್ತಿರುವ ಹವ್ಯಕ ಸಮಾಜ ಮಾದರಿಯಾಗಿ ರೂಪುಗೊಂಡಿದೆ. ತನ್ನೊಟ್ಟಿಗೆ ಇತರ ಸಮುದಾಯಗಳನ್ನೂ ಕರೆದುಕೊಂಡು ಹೋಗುವ ಕಾರ್ಯವನ್ನು ಹವ್ಯಕ ಸಮಾಜ ಮಾಡುತ್ತಿರುವುದು ಪ್ರಶಂಸಾರ್ಹ ಎಂದು ಹೇಳಿದರು.
ರಾಮಚಂದ್ರಪುರಮಠ, ಸ್ವರ್ಣವಲ್ಲೀ ಮಠ, ಶ್ರೀಮನ್ನೆಲೆಮಾವು ಮಠಗಳ ಮಾರ್ಗದರ್ಶನದಲ್ಲಿ ಹವ್ಯಕ ಸಮುದಾಯ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಯಾವುದೇ ಕೆಲಸ ಜಾತಿಗೆ ಸೀಮಿತವಲ್ಲ. ನಾವು ಎಲ್ಲೇ ಹುಟ್ಟಲಿ ನಮ್ಮ ಸುತ್ತಮುತ್ತಲ ಸಮಾಜ ಬೆಳೆಯಲು ಪೂರಕವಾಗಿ ಬೆಳೆಯಬೇಕು ಎಂಬ ಭಾವನೆ ಹವ್ಯಕರಲ್ಲಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹವ್ಯಕರು ಸಂಸ್ಕಾರ, ಸಂಸ್ಕೃತಿ ಸೂಚಕ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹವ್ಯಕ ಸಮಾಜ ಉಪಕಾರ ಮಾಡಿದವರನ್ನು ಮರೆಯಬಾರದು ಎಂಬುದನ್ನು ಕಲಿಸಿದೆ. ಹವ್ಯಕರು ಕೇವಲ ಜಾತಿ ಸೂಚಕವಾಗಿ ಇದ್ದವರಲ್ಲ. ಸಂಸ್ಕಾರ, ಸಂಸ್ಕೃತಿ ಸೂಚಕವಾಗಿ ಇದ್ದವರು. ಪ್ರಸ್ತುತ ಜನಸಂಖ್ಯೆಯಲ್ಲಿ ಕಡಿಮೆ ಆಗುತ್ತಿರುವ ಹವ್ಯಕ ಸಮಾಜ ಸಂಘಟನೆ ಅತಿ ಮುಖ್ಯ ಎನ್ನುವುದನ್ನು ಅರಿತು ವ್ಯವಹರಿಸಬೇಕಿದೆ. ಸಮಾಜದಲ್ಲಿ ಒಗ್ಗಟ್ಟು ಇದ್ದರೆ ಎಲ್ಲವನ್ನೂ ಗಳಿಸಬಹುದು. ಹಾಗಾಗಿ ಒಗ್ಗಟ್ಟಿನ ಮೂಲಕ ನಾವು ಜಾಗೃತ ಸಮಾಜ ಎನ್ನುವುದನ್ನು ಸಾಬೀತುಪಡಿಸಬೇಕಿದೆ ಎಂದು ಕರೆ ನೀಡಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಹವ್ಯಕ ಸಮುದಾಯದಲ್ಲಿ ಇರುವ ಜ್ಞಾನ ಹಾಗೂ ಜಾಗೃತಿಯ ಕಾರಣದಿಂದಾಗಿ ಈ ಸಮಾಜವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ರಾಮಚಂದ್ರಪುರ ಮಠದ ಸ್ವಾಮೀಜಿ ಅವರು ಹವ್ಯಕ ಸಮಾಜದವರು ಮೂರು ಮಕ್ಕಳನ್ನು ಪಡೆಯಿರಿ ಎಂದು ಹೇಳಿರುವ ಬಗ್ಗೆ ಗೌರವ ಇದೆ. ಆದರೆ ಮಕ್ಕಳನ್ನು ಮಾಡಿಕೊಳ್ಳುವಂತೆ ಹೆಚ್ಚಿನ ಒತ್ತಡ ಹಾಕುವಂತಿಲ್ಲ. ಅದು ಆಯಾ ಕುಟುಂಬದ ಪರಿಸ್ಥಿತಿಗೆ ಅನುಗುಣವಾಗಿ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಉತ್ತರ ಭಾರತಕ್ಕೆ ಹೊಲಿಸಿಕೊಂಡರೆ ದಕ್ಷಿಣ ಭಾರತದಲ್ಲಿ ಜನನ ಪ್ರಮಾಣ ಬಹಳ ಕಡಿಮೆ ಇದೆ. ದಕ್ಷಿಣ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲೂ ತೀವ್ರವಾಗಿ ಜನನ ಪ್ರಮಾಣ ಕಡಿಮೆಯಾಗಿದೆ ಎಂದರು.
ಹವ್ಯಕ ಸಮಾಜ ಸಂಸ್ಕೃತಿಯನ್ನು ತಂತ್ರಜ್ಞಾನದಿಂದ ಉಳಿಸಿಕೊಳ್ಳಲು ಸಾಧ್ಯವಿದೆ. ತಂತ್ರಜ್ಞಾನ ಬಳಸಿಕೊಂಡು ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಲು ಸಾಧ್ಯ ಎಂದ ಅವರು, ರಾಜ್ಯ ಸರ್ಕಾರ ಹವ್ಯಕ ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಸಹಾಯ ಮಾಡಲು ಸಿದ್ಧವಿದೆ ಎಂದು ತಿಳಿಸಿದರು.
ನಮ್ಮ ತನ ಉಳಿಸಿಕೊಳ್ಳಬೇಕು: ಮಾಧವಾನಂದ ಭಾರತೀ ಶ್ರೀ
ಸಿದ್ದಾಪುರದ ಶ್ರೀ ಮನ್ನೆಲಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಹವ್ಯಕ ಸಂಪ್ರದಾಯ ಉಳಿಯಬೇಕಾದರೆ ಸಂಪ್ರದಾಯಗಳನ್ನು ಆಚರಣೆಯಲ್ಲಿ ಇಟ್ಟಕೊಳ್ಳಬೇಕು. ಸಮಾಜ ಸಿಂಹಾವಲೋಕನ ಮಾಡಿಕೊಳ್ಳಬೇಕಾದ ಹೊತ್ತು ಇದಾಗಿದೆ. ಹವ್ಯಕರ ಸಂಸ್ಕಾರ, ಸಂಸ್ಕೃತಿ ಹಾಗೂ ಸಂಘಟನಾ ಶಕ್ತಿಗೆ ವಿಶ್ವ ಹವ್ಯಕ ಸಮ್ಮೇಳನ ಸಾಕ್ಷಿ. ನಾವು ನಮ್ಮ ಮೂಲ ಮರೆಯದೇ ನಮ್ಮತನ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಉದಯವಾಣಿ ಸಂಪಾದಕ ರವಿಶಂಕರ್ ಕೆ.ಭಟ್ ಮಾತನಾಡಿ, ಹವ್ಯಕ ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳ ಕುರಿತು ಸೂಕ್ತ ಅಧ್ಯಯನ ವೇದಿಕೆ ಸೃಷ್ಟಿಯಾಗಬೇಕು. ಹವ್ಯಕಕ್ಕೆ ಅಕಾಡೆಮಿ ಇಲ್ಲದಿದ್ದರೂ ಅಧ್ಯಯನ ಪೀಠ ಮಾಡಬೇಕು. ಹವ್ಯಕ ಭಾಷೆಯ ಪದಗಳು ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳಲು ನಿಘಂಟು ಮಾಡಬೇಕು. ಹವ್ಯಕರ ಆಹಾರ ಪದಾರ್ಥಗಳಿಗೆ ಮೈಸೂರು ಪಾಕ್, ಕರದಂಟು ಮಾದರಿಯಲ್ಲಿ ಜಿಐ ಟ್ಯಾಗ್ ಮಾಡಿಸಿ ಸಂರಕ್ಷಿಸಿಡುವ ಕೆಲಸವೂ ಆಗಬೇಕು. ಈ ನಿಟ್ಟಿನಲ್ಲಿ ಹವ್ಯಕ ಸಮುದಾಯ ಹೆಜ್ಜೆ ಇಟ್ಟರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿದರು. ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ತೃತೀಯ ವಿಶ್ವ ಹವ್ಯಕ ಸಮ್ಮೇಳನ ಪ್ರಧಾನ ಸಮಿತಿ ಅಧ್ಯಕ್ಷ ಡಾ.ಗಿರಿಧರ ಕಜೆ ಉಪಸ್ಥಿತರಿದ್ದರು.
;Resize=(690,390))
)
;Resize=(128,128))
;Resize=(128,128))