ಸಾರಾಂಶ
ಚಿನ್ನ ಕಳ್ಳ ಸಾಗಣೆ ಪ್ರಕರಣದ ಬಂಧಿತ ಆರೋಪಿ, ಡಿಜಿಪಿ ಅವರ ಮಲ ಮಗಳು ರನ್ಯಾ ರಾವ್ ಹಾಗೂ ಆಕೆಯ ಇಬ್ಬರು ಸ್ನೇಹಿತರ ವಿರುದ್ಧ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ)ವು ವಿದೇಶಿ ವಿನಿಮಯ ಸಂರಕ್ಷಣೆ ಹಾಗೂ ಕಳ್ಳ ಸಾಗಣೆ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಕಾಫಿಪೊಸಾ) ಪ್ರಯೋಗಿಸಿದೆ.
ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದ ಬಂಧಿತ ಆರೋಪಿ, ಡಿಜಿಪಿ ಅವರ ಮಲ ಮಗಳು ರನ್ಯಾ ರಾವ್ ಹಾಗೂ ಆಕೆಯ ಇಬ್ಬರು ಸ್ನೇಹಿತರ ವಿರುದ್ಧ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ)ವು ವಿದೇಶಿ ವಿನಿಮಯ ಸಂರಕ್ಷಣೆ ಹಾಗೂ ಕಳ್ಳ ಸಾಗಣೆ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಕಾಫಿಪೊಸಾ) ಪ್ರಯೋಗಿಸಿದೆ.
ರಾಜ್ಯದ ಗೂಂಡಾ ಕಾಯ್ದೆ ಮಾದರಿಯ ಈ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಪರಿಣಾಮ ಆರೋಪಿ ರನ್ಯಾ ರಾವ್, ಆಕೆಯ ಸ್ನೇಹಿತರಾದ ನಟ ತರುಣ್ ಹಾಗೂ ಸಾಹಿಲ್ ಜೈನ್ ಅವರು ಒಂದು ವರ್ಷ ಜಾಮೀನು ಸಿಗದೆ ಜೈಲಿನಲ್ಲೇ ಇರಬೇಕಾಗುತ್ತದೆ. ವೃತ್ತಿಪರ ಕಳ್ಳ ಸಾಗಣಿದಾರರ ವಿರುದ್ಧ ಪ್ರಯೋಗಿಸುವ ಕಾಫಿಪೋಸಾ ಕಾಯ್ದೆಯನ್ನು ರನ್ಯಾ ತಂಡದ ಮೇಲೆ ಡಿಆರ್‌ಐ ಹೂಡಿರುವುದು ಮಹತ್ವ ಪಡೆದುಕೊಂಡಿದೆ.
ಕಳೆದ ಮಾರ್ಚ್‌ನಲ್ಲಿ ದುಬೈನಿಂದ 12 ಕೋಟಿ ರು. ಮೌಲ್ಯದ 14.1 ಕೆ.ಜಿ. ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ರನ್ಯಾರಾವ್‌ರನ್ನು ಡಿಆರ್‌ಐ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಆಕೆ 43 ಕೋಟಿ ರು. ಮೌಲ್ಯಕ್ಕೂ ಮಿಗಿಲಾದ ಚಿನ್ನಾಭರಣ ಸಾಗಿಸಿರುವುದು ಪತ್ತೆಯಾಗಿತ್ತು. ಈ ಕಳ್ಳ ಸಾಗಣೆಗೆ ನೆರವು ನೀಡಿದ್ದ ಆಕೆಯ ಸ್ನೇಹಿತ ಹಾಗೂ ಬೆಂಗಳೂರಿನ ಏಟ್ರಿಯಾ ಹೋಟೆಲ್ ಸಮೂಹದ ಮಾಲಿಕರ ಮೊಮ್ಮಗ ತರುಣ್ ಹಾಗೂ ಬಳ್ಳಾರಿ ಚಿನ್ನಾಭರಣ ವ್ಯಾಪಾರಿ ಸಾಹಿಲ್ ಜೈನ್‌ನನ್ನೂ ಡಿಆರ್‌ಐ ಬಂಧಿಸಿತ್ತು.
ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಡಿಆರ್‌ಐ ಅಧಿಕಾರಿಗಳು, ರನ್ಯಾ ತಂಡದ ವಿರುದ್ಧ ಕಾಫಿಪೊಸಾ ಪ್ರಯೋಗಕ್ಕೆ ಕೇಂದ್ರ ಆರ್ಥಿಕ ಗುಪ್ತಚರ ಮಂಡಳಿಗೆ ಪ್ರಸ್ತಾಪನೆ ಸಲ್ಲಿಸಿದ್ದರು. ಈ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಆರೋಪಿಗಳ ವಿರುದ್ಧ ಕಾಫಿಪೊಸಾ ಕಾಯ್ದೆ ಹೂಡಲಾಗಿದೆ ಎಂದು ಮೂಲಗಳು ಹೇಳಿವೆ.