ಸಾರಾಂಶ
ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ರಸ್ತೆ, ಕುಡಿಯುವ ನೀರು, ಜನರಿಗೆ ಸುಗಮವಾಗಿ ವಿವಿಧ ಸೇವೆ, ಗ್ರಾ.ಪಂ.ಗಳ ಆದಾಯ ಹೆಚ್ಚಿಸಲು ಹೊಸ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಒಟ್ಟಾರೆ 26,735 ಕೋಟಿ ರು.ಹಂಚಿಕೆ ಮಾಡಲಾಗಿದೆ.
ಬೆಂಗಳೂರು : ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ರಸ್ತೆ, ಕುಡಿಯುವ ನೀರು, ಜನರಿಗೆ ಸುಗಮವಾಗಿ ವಿವಿಧ ಸೇವೆ, ಗ್ರಾ.ಪಂ.ಗಳ ಆದಾಯ ಹೆಚ್ಚಿಸಲು ಹೊಸ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಒಟ್ಟಾರೆ 26,735 ಕೋಟಿ ರು.ಹಂಚಿಕೆ ಮಾಡಲಾಗಿದೆ.
ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ‘ಕೃಷಿ ಪಥ’ ಯೋಜನೆ, ಗ್ರಾಮೀಣ ಪ್ರದೇಶಗಳಲ್ಲಿ ಹಾದು ಹೋಗುವ ರಾಜ್ಯ ಮತ್ತು ಜಿಲ್ಲಾ ರಸ್ತೆಗಳ ಬದಿಗಳಲ್ಲಿ ಐದು ಸಾವಿರ ಕಿ.ಮೀ.ವ್ಯಾಪ್ತಿಯಲ್ಲಿ ಸಸಿಗಳನ್ನು ಬೆಳೆಸಲು ‘ಹಸಿರು ಪಥ’ ನಿರ್ಮಾಣ, ರೈತರ ಜಮೀನುಗಳಲ್ಲಿ ಅಂತರ್ಜಲ ಹಾಗೂ ಮಣ್ಣಿನ ಸಂರಕ್ಷಣೆ ಹೆಚ್ಚಿಸಲು ‘ಕೃಷಿ ಕವಚ’ ಕಾರ್ಯಕ್ರಮ ಅಡಿ 50 ಸಾವಿರ ಹೆಕ್ಟೇರ್ ಬದು ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿದೆ.
ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲು 5,200 ಕೋಟಿ ರು.ಗಳ ‘ಪ್ರಗತಿ ಪಥ’ ಯೋಜನೆಯನ್ನು ಈ ವರ್ಷ ಆರಂಭಿಸಲಾಗುವುದು. ಸೌರಶಕ್ತಿಯನ್ನು ಬಳಸಿ ಗ್ರಾ.ಪಂ.ಗಳ ವಿದ್ಯುತ್ ಬಿಲ್ಲಿನ ಹೊರೆ ಕಡಿಮೆ ಮಾಡಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ ಮೈಕ್ರೋ-ಗ್ರಿಡ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
‘ಗ್ರಾಮ ಪಂಚಾಯಿತಿ ದತ್ತು’ ಕಾರ್ಯಕ್ರಮ:
ಹಿರಿಯ ಅಧಿಕಾರಿಗಳಿಂದ ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ‘ಗ್ರಾಮ ಪಂಚಾಯಿತಿ ದತ್ತು’ ಕಾರ್ಯಕ್ರಮ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ತ್ಯಾಜ್ಯ ನೀರನ್ನು ನಿರ್ವಹಣೆ ಮಾಡಲು 500 ಗ್ರಾಮಗಳಲ್ಲಿ ಬೂದು ನೀರು ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗುವುದು. ಗ್ರಾಮೀಣ ಪ್ರದೇಶದ ಸ್ವ-ಸಹಾಯ ಸಂಘಗಳ ಪಾಲ್ಗೊಳ್ಳುವಿಕೆಯೊಂದಿಗೆ ಮಿಶ್ರ ಬೆಳೆ ಪದ್ಧತಿಯಲ್ಲಿ ಸಾಂಬಾರ ಪದಾರ್ಥಗಳು ಹಾಗೂ ಹಣ್ಣಿನ ಬೆಳೆಗಳನ್ನು 5,000 ಎಕರೆ ಪ್ರದೇಶದಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ.
ಇ-ಸ್ವತ್ತು ಅಭಿಯಾನ ಆರಂಭಕ್ಕೆ ನಿರ್ಧಾರ:
ಜನರಿಗೆ ಉತ್ತಮ ಸೇವೆ ಒದಗಿಸಲು ಎಲ್ಲ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ಪ್ರಮಾಣ ಪತ್ರ ವಿತರಿಸಲು ‘ಇ-ಸ್ವತ್ತು ಅಭಿಯಾನ’ ಆರಂಭಿಸಲಾಗುವುದು. ಪಂಚತಂತ್ರ ತಂತ್ರಾಂಶವನ್ನು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೂ ವಿಸ್ತರಣೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
‘ಚಿಗುರು’, ‘ಅಧಿಕಾರ-ಸಾಕಾರ’:
ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರಗಳಲ್ಲಿ ವಿಜ್ಞಾನ, ಕಲೆ, ಸಾಹಿತ್ಯ ಮತ್ತು ವೃತ್ತಿ ಮಾರ್ಗದರ್ಶನ ಕುರಿತಾದ ‘ಚಿಗುರು’ ಕಾರ್ಯಕ್ರಮ, ಮಕ್ಕಳು ಮತ್ತು ಮಹಿಳೆಯರಿಗಾಗಿ ‘ಸಂವಿಧಾನ ಸಾಕ್ಷರತೆ’, ಮಹಿಳೆಯರಿಗಾಗಿ ‘ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ’ ಹಾಗೂ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ‘ಅಧಿಕಾರ-ಸಾಕಾರ’ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಲಾಗಿದೆ.
ಗ್ರಾ.ಪಂ.ಆದಾಯ ಹೆಚ್ಚಿಸಲು ಕ್ರಮ:
ಗ್ರಾಮ ಪಂಚಾಯಿತಿಗಳ ಸುಸ್ಥಿರ ಆದಾಯ ಮೂಲಗಳನ್ನು ಬಲಪಡಿಸಲು ಗ್ರಾ.ಪಂ.ಸ್ವತ್ತುಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆದಾಯದ ಸೃಜನೆಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.