ಕರ್ನಾಟಕ ಬಜೆಟ್ 2025 : ಕಟ್ಟಡ ಕಾರ್ಮಿಕರ ಕುಟುಂಬದವರಿಗೆ ಮರಣ ಪರಿಹಾರ ಡಬ್ಬಲ್‌

| N/A | Published : Mar 08 2025, 11:46 AM IST

Money

ಸಾರಾಂಶ

ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಮರಣ ಹೊಂದಿದಲ್ಲಿ ನೀಡುತ್ತಿದ್ದ ಪರಿಹಾರ ಡಬ್ಬಲ್‌, ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಕುಟುಂಬದವರಿಗೆ ಪಾವತಿಸುತ್ತಿದ್ದ ಪರಿಹಾರದ ಮೊತ್ತ 5 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಳ

 ಬೆಂಗಳೂರು : ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಮರಣ ಹೊಂದಿದಲ್ಲಿ ನೀಡುತ್ತಿದ್ದ ಪರಿಹಾರ ಡಬ್ಬಲ್‌, ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಕುಟುಂಬದವರಿಗೆ ಪಾವತಿಸುತ್ತಿದ್ದ ಪರಿಹಾರದ ಮೊತ್ತ 5 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಳ, ಕಾರ್ಮಿಕರ ಮಕ್ಕಳಿಗೆ 31 ಜಿಲ್ಲೆಯಲ್ಲಿ ವಸತಿ ಶಾಲೆ ಸ್ಥಾಪಿಸಲು 750 ಕೋಟಿ ರು.ಅನುದಾನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಮರಣ ಹೊಂದಿದಲ್ಲಿ ಇಲ್ಲಿಯವರೆಗೂ 75 ಸಾವಿರ ರು.ಪರಿಹಾರ ನೀಡಲಾಗುತ್ತಿತ್ತು. ಆದರೆ, ಇದನ್ನು ದುಪ್ಪಟ್ಟು ಮಾಡಿ ಅಂದರೆ 1.50 ಲಕ್ಷ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಕುಟುಂಬದವರಿಗೆ ನೀಡುತ್ತಿದ್ದ ಪರಿಹಾರವನ್ನೂ 5 ಲಕ್ಷದಿಂದ 8 ಲಕ್ಷ ರುಪಾಯಿಗೆ ಹೆಚ್ಚಳ ಮಾಡಲಾಗಿದೆ.

ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 31 ಜಿಲ್ಲೆಯಲ್ಲೂ 6 ರಿಂದ 12ನೇ ತರಗತಿವರೆಗೆ ವಸತಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಶಾಲೆಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ನಿರ್ವಹಿಸಲಾಗುತ್ತಿದ್ದು, ಇದಕ್ಕಾಗಿ ಒಟ್ಟಾರೆ 750 ಕೋಟಿ ರು.ಅನುದಾನ ನಿಗದಿ ಮಾಡಲಾಗಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಶೈಕ್ಷಣಿಕ, ವೈದ್ಯಕೀಯ ಮತ್ತು ಇತರ ಸೌಲಭ್ಯಗಳಿಗೆ ನೀಡುತ್ತಿದ್ದ ಧನಸಹಾಯವನ್ನು ದ್ವಿಗುಣಗೊಳಿಸಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಮಂಡಳಿಯ ಫಲಾನುಭವಿಗಳು 5 ಲಕ್ಷ ರು. ಚಿಕಿತ್ಸೆ ಮಿತಿ ಪೂರ್ಣಗೊಳಿಸಿದ್ದಲ್ಲಿ ಮಂಡಳಿಯಿಂದ ಹೆಚ್ಚುವರಿಯಾಗಿ ಹೃದ್ರೋಗ ಮತ್ತು ಕ್ಯಾನ್ಸರ್ ಖಾಯಿಲೆಗಳಿಗೆ 5 ಲಕ್ಷ ಮತ್ತು ಇತರೆ ಖಾಯಿಲೆಗಳಿಗೆ 2 ಲಕ್ಷ ರು. ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲಾಗುವುದು.

ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ರಾಜ್ಯದ ವಿಮಾ ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು 51 ಕೋಟಿ ರು.ಅನುದಾನ ಮಂಜೂರು ಮಾಡಲಾಗಿದೆ. ಆಸ್ಪತ್ರೆಗಳ ಶುಚಿತ್ವ, ಪರಿಕರಗಳ ಖರೀದಿ, ತುರ್ತು ವಿಭಾಗಗಳ ನವೀಕರಣ, ಪ್ರಯೋಗಾಲಯಗಳ ಉನ್ನತೀಕರಣ ಮತ್ತಿತರ ಕಾರ್ಯಗಳಿಗೆ ಈ ಹಣ ಬಳಸಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೆಸ್‌ ಹಣ ಇರುವುದರಿಂದ ಸಹಜ ಮರಣ ಹೊಂದಿದ ಪರಿಹಾರವನ್ನು 75 ಸಾವಿರದಿಂದ 1.50 ಲಕ್ಷ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಕುಟುಂಬದವರಿಗೆ ನೀಡುತ್ತಿದ್ದ ಪರಿಹಾರವನ್ನೂ 5 ಲಕ್ಷದಿಂದ 8 ಲಕ್ಷ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಆದರೆ, ಶೇ.97ರಷ್ಟಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಬಜೆಟ್‌ ಪೂರಕವಾಗಿಲ್ಲ. ಕಾರ್ಮಿಕರಿಗೆ ಕನಿಷ್ಟ ವೇತನದ ಬಗ್ಗೆ ಪ್ರಸ್ತಾಪವಿಲ್ಲ, ಸಾಮಾಜಿಕ ಭದ್ರತೆ ಬಗ್ಗೆ ಹೇಳಿಲ್ಲ. ಕಾರ್ಖಾನೆಗಳು ಇದ್ದಕ್ಕಿದ್ದಂತೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದಾಗ ಕೆಲಸ ಸಿಗುವವರೆಗೂ ಕನಿಷ್ಟ ಹಣ ನೀಡುವ ಬಗ್ಗೆ ಪ್ರಸ್ತಾಪ ಮಾಡಬೇಕಿತ್ತು.

- ಜಿ.ಆರ್‌.ಶಿವಶಂಕರ್‌, ಟಿಯುಸಿಸಿ ಅಧ್ಯಕ್ಷ.