ಸಾರಾಂಶ
ರಾಜ್ಯದಲ್ಲಿ ಏಡ್ಸ್ ನಿಯಂತ್ರಣಕ್ಕೆ ಬರುತ್ತಿದ್ದು, ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. 2014ರಲ್ಲಿ ಒಟ್ಟಾರೆ ತಪಾಸಣೆಯ ಶೇ.1.77ರಷ್ಟು ಇದ್ದ ಸೋಂಕಿನ ಪ್ರಮಾಣ, 2024-25ರಲ್ಲಿ ಶೇ.0.33ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಏಡ್ಸ್ ನಿಯಂತ್ರಣಕ್ಕೆ ಬರುತ್ತಿದ್ದು, ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. 2014ರಲ್ಲಿ ಒಟ್ಟಾರೆ ತಪಾಸಣೆಯ ಶೇ.1.77ರಷ್ಟು ಇದ್ದ ಸೋಂಕಿನ ಪ್ರಮಾಣ, 2024-25ರಲ್ಲಿ ಶೇ.0.33ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ನಗರದ ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ವರ್ಷ ರಾಜ್ಯದಲ್ಲಿ 13,183 ಪ್ರಕರಣಗಳು ವರದಿಯಾಗಿದ್ದು, ಈ ಸಾಲಿನ ಅಕ್ಟೋಬರ್‌ವರೆಗೆ 7,720 ಪ್ರಕರಣಗಳು ಪತ್ತೆಯಾಗಿವೆ. ಗರ್ಭಿಣಿಯರಲ್ಲಿ ಕಳೆದ ವರ್ಷ 539 ಸೋಂಕು ಹಾಗೂ ಈ ವರ್ಷ ಅಕ್ಟೋಬರ್‌ವರೆಗೆ 247 ಸೋಂಕು ವರದಿಯಾಗಿವೆ. ಗರ್ಭಿಣಿಯರಲ್ಲಿ ಸೋಂಕು ದೃಢಪಡುವ ಪ್ರಮಾಣ ಶೇ.0.03ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸುವ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡಬೇಕು ಎಂದರು.
ಟ್ರಕ್ ಚಾಲಕರು, ಕೆಲಸದ ಮೇಲೆ ಪ್ರಯಾಣ ಮಾಡುವವರು, ಲೈಂಗಿಕ ಕಾರ್ಯಕರ್ತರು, ಮಾದಕವಸ್ತುಗಳನ್ನು ಸ್ವೀಕರಿಸುವವರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುತ್ತದೆ. ಸುರಕ್ಷಿತ ಲೈಂಗಿಕ ಕ್ರಿಯೆಯೇ ಮಾರಣಾಂತಿಕ ಕಾಯಿಲೆಯಿಂದ ಪಾರಾಗಲು ದಾರಿ. ಲೈಂಗಿಕ ಕಾರ್ಯಕರ್ತೆಯರನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಗೆ ಇಟ್ಟಿರುವ ಕಾರಣ ಗಂಡಾಂತರಗಳು ಉಂಟಾಗುತ್ತಿವೆ. ಆದರೆ ಅವರನ್ನು ಮಾನವೀಯತೆ ದೃಷ್ಟಿಯಿಂದ ನೋಡದಿದ್ದರೆ ಏಡ್ಸ್ ನಿಯಂತ್ರಣ ಅಸಾಧ್ಯ ಎಂದು ಸಚಿವರು ಹೇಳಿದರು.
ಸರ್ಕಾರದ ಪ್ರಧಾನ ಕಾರ್ಯದಶಿ ಹರ್ಷ ಗುಪ್ತ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
3,98,157 ಸೋಂಕಿತರು ನೋಂದಣಿ
ರಾಜ್ಯದಲ್ಲಿ ಎಚ್‌ಐವಿ ಚಿಕಿತ್ಸೆಗೆ 3,98,157 ಜನ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 18 ವರ್ಷದೊಳಗಿನವರ ಸಂಖ್ಯೆ 18,750 ಇದೆ. 1,90,560 ಜನ ಮಾತ್ರ ಕ್ರಮಬದ್ಧವಾಗಿ ಔಷಧಿ ಪಡೆಯುತ್ತಿದ್ದಾರೆ. 2004ರಿಂದ ಈವರೆಗೆ 1,10,585 ಜನ ಏಡ್ಸ್‌ಗೆ ಬಲಿಯಾಗಿದ್ದಾರೆ.