ಸಾರಾಂಶ
ಭಯೋತ್ಪಾದನೆ ಮಟ್ಟಹಾಕಲು ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಈ ವಿಚಾರದಲ್ಲಿ ನಾವು ಯಾವತ್ತೂ ರಾಜಕೀಯ ಮಾಡಿಲ್ಲ.
ಬೆಂಗಳೂರು : ಭಯೋತ್ಪಾದನೆ ಮಟ್ಟಹಾಕಲು ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಈ ವಿಚಾರದಲ್ಲಿ ನಾವು ಯಾವತ್ತೂ ರಾಜಕೀಯ ಮಾಡಿಲ್ಲ. ಕೇಂದ್ರ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಕಾಶ್ಮೀರದಲ್ಲಿನ ಭಯೋತ್ಪಾದನೆ ದಾಳಿ ಕುರಿತು ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹಿಂದೆ ಅಮರನಾಥ ಯಾತ್ರೆ ವೇಳೆಯೂ ಇಂಥ ದಾಳಿ ನಡೆದಿತ್ತು. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡು ಪ್ರವಾಸಿಗರಿಗೆ ಹೆಚ್ಚಿನ ಭದ್ರತೆ ಒದಗಿಸಿಕೊಡಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಸಲಹೆ-ಅಭಿಪ್ರಾಯ ಪಡೆಯಬೇಕು. ನಮ್ಮ ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡುವಾಗ ರಾಜಕೀಯ ಮಾಡುವುದಿಲ್ಲ. ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸಲಿ, ಸಾಧ್ಯವಾಗದ್ದನ್ನು ತಿರಸ್ಕರಿಸಬಹುದು. ಸರ್ವಪಕ್ಷ ಸಭೆ ಮಾಡಿದಾಗ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಇದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ ಎಂದರು.
ಘಟನೆ ಬೆನ್ನಲ್ಲೇ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹಾಗೂ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಅನೇಕ ಮಾಹಿತಿ ಪಡೆದಿದ್ದೇನೆ. ಈ ಕೃತ್ಯದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ ಎಂದರು.
ಈ ವಿಚಾರವಾಗಿ ಗುರುವಾರ ಬೆಳಗ್ಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ನನ್ನ ಮಗನನ್ನು ನೋಡಲು ನಾನು ಪ್ರತಿವಾರ ಬೆಂಗಳೂರಿಗೆ ಆಗಮಿಸುತ್ತೇನೆ. ಸಭೆ ಹಿನ್ನೆಲೆಯಲ್ಲಿ ನನ್ನ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.
ಮೃತರ ಕುಟಂಬಕ್ಕೆ ಸಾಂತ್ವನ:
ಇದು ರಾಜಕೀಯ ಮಾಡುವ ಸಮಯ ಅಲ್ಲ. ಎಲ್ಲರೂ ಒಗ್ಗಟ್ಟಾಗಿ ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಸಮಯ. ಈ ಹೀನ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾದ ಸಮಯ. ದೇಶದ ವಿವಿಧ ಭಾಗಗಳಿಂದ ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರಲ್ಲಿ ಶಿವಮೊಗ್ಗದ ನಿವಾಸಿ ಮಂಜುನಾಥ್, ಬೆಂಗಳೂರು ಭೂಷಣ್ ಕೂಡ ಹತ್ಯೆಯಾಗಿದ್ದಾರೆ. ಅವರ ಪತ್ನಿಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ. ಕಾಶ್ಮೀರದಲ್ಲಿ ಸಿಲುಕಿರುವ ಕರ್ನಾಟಕದ ಪ್ರವಾಸಿಗರನ್ನು ಕರೆತರಲು ರಾಜ್ಯ ಸರ್ಕಾರ ಕೂಡ ಎಲ್ಲ ಅಗತ್ಯ ಕ್ರಮ ವಹಿಸಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕಳುಹಿಸಿದೆ. ಜಮ್ಮು ಕಾಶ್ಮೀರದ ಸಿಎಂ ಜತೆ ಚರ್ಚೆ ಮಾಡಿ ಇತರೆ ರಾಜ್ಯಗಳ ಪ್ರವಾಸಿಗರಿಗೆ ನೆರವು ನೀಡುವಂತೆ ಕೋರಿದ್ದೇನೆ. ಗೃಹ ಸಚಿವ ಅಮಿತ್ ಶಾ ಕೂಡ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ ಎಂದರು.