ಸಾರಾಂಶ
ಬೆಂಗಳೂರಿನ ಉತ್ತರಾದಿ ಮಠದಲ್ಲಿ ವ್ಯಾಪಕ ಹಣಕಾಸು ಅವ್ಯವಹಾರ ನಡೆಯುತ್ತಿದ್ದು, ಖಾಸಗಿ ಕಂಪನಿಗಳಿಗೆ ಅನಧಿಕೃತ ಹಣ ವರ್ಗಾವಣೆ ಹಾಗೂ ನಗದು ವಿತ್ ಡ್ರಾ ಮೂಲಕ 30 ಕೋಟಿ ರುಪಾಯಿಗೂ ಹೆಚ್ಚು ದುರುಪಯೋಗ
ಬೆಂಗಳೂರು : ಬೆಂಗಳೂರಿನ ಉತ್ತರಾದಿ ಮಠದಲ್ಲಿ ವ್ಯಾಪಕ ಹಣಕಾಸು ಅವ್ಯವಹಾರ ನಡೆಯುತ್ತಿದ್ದು, ಖಾಸಗಿ ಕಂಪನಿಗಳಿಗೆ ಅನಧಿಕೃತ ಹಣ ವರ್ಗಾವಣೆ ಹಾಗೂ ನಗದು ವಿತ್ ಡ್ರಾ ಮೂಲಕ 30 ಕೋಟಿ ರುಪಾಯಿಗೂ ಹೆಚ್ಚು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಮಠದ ಭಕ್ತಾದಿಗಳು ಆರೋಪ ಮಾಡಿದ್ದಾರೆ.
ಹೀಗಾಗಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂಬ ಬೇಡಿಕೆ ಭಕ್ತಾದಿಗಳಿಂದ ಬಲವಾಗಿ ಕೇಳಿಬಂದಿದೆ.
ಉತ್ತರಾದಿ ಮಠದ ಅಧಿಕೃತ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣಕಾಸು ವರ್ಗಾವಣೆ ನಡೆಯುತ್ತಿದೆ. ಮಠದ ಅಧಿಕೃತ ಬ್ಯಾಂಕ್ ಖಾತೆಯಿಂದ 2024ರ ಏ.10 ರಿಂದ 2025ರ ಮಾ.27ರ ನಡುವೆ ಬರೋಬ್ಬರಿ 9.23 ಕೋಟಿ ರು. ಸೇರಿ ಒಟ್ಟು 13 ಕೋಟಿ ರು.ಗಳಷ್ಟು ಹಣವನ್ನು ಶ್ರೀನಿವಾಸ ಕನ್ಸಲ್ಟೆನ್ಸಿ ಎಂಬ ಕಂಪನಿಗೆ ವರ್ಗಾವಣೆ ಮಾಡಲಾಗಿದೆ. ಈ ಕಂಪೆನಿಯ ಬ್ಯಾಂಕ್ ಖಾತೆ ಚೆನ್ನೈನಲ್ಲಿದ್ದು ಇದು ಚೆನ್ನೈ ಮೂಲದ ಕಂಪೆನಿ. ಈ ಕಂಪೆನಿಗೆ ಇಷ್ಟು ಹಣ ಯಾಕೆ ವರ್ಗಾವಣೆ ಮಾಡಿದ್ದಾರೆ ಎಂಬ ಬಗ್ಗೆ ಅನುಮಾನ ಹುಟ್ಟಿರುವುದಾಗಿ ಭಕ್ತಾದಿಗಳಿಂದ ಆರೋಪ ವ್ಯಕ್ತವಾಗಿದೆ.
ಕನಿಷ್ಠ 7 ಲಕ್ಷ ರು.ಗಳಿಂದ ಗರಿಷ್ಠ 1.25 ಕೋಟಿ ರು.ವರೆಗೆ ವಿವಿಧ ದಿನಾಂಕಗಳಲ್ಲಿ ಹಣ ವರ್ಗಾವಣೆ ನಡೆದಿದ್ದು, ಕಳೆದ ಒಂದು ವರ್ಷದಲ್ಲಿ ಒಟ್ಟು 13 ಕೋಟಿ ರು.ಗಳನ್ನು ಖಾಸಗಿ ಕಂಪೆನಿಗೆ ಸಕಾರಣ ಇಲ್ಲದೆ ವರ್ಗಾವಣೆ ಮಾಡಲಾಗಿದೆ. ಈ ಹಣ ವರ್ಗಾವಣೆಗೆ ನಿಯಮಾನುಸಾರ ಜಿಎಸ್‌ಟಿ, ಟಿಡಿಎಸ್ ಪಾವತಿಸಿಲ್ಲ. ಯಾವುದೇ ರೀತಿಯ ಇನ್‌ವಾಯ್ಸ್ (ರಸೀದಿ ದಾಖಲೆ) ಸೃಜಿಸಿಲ್ಲ. ಒಂದು ವೇಳೆ ಸಾಲ ನೀಡಿದ್ದರೂ ಸಾಲ ಕರಾರುವಿನಂಥ ಯಾವುದೇ ದಾಖಲೆಗಳು ಇಲ್ಲ. ಇದು ಆದಾಯ ತೆರಿಗೆ ನಿಯಮಗಳ ಉಲ್ಲಂಘನೆ. ಈ ಬಗ್ಗೆ ಮಠದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಭಕ್ತಾದಿಗಳು ಕೋರಿರುವುದಾಗಿ ಹೇಳಲಾಗಿದೆ.
ಇದಲ್ಲದೆ 10 ಕೋಟಿ ರು.ಗಳಷ್ಟು ಹಣವನ್ನು ವಿತ್ ಡ್ರಾ ಮಾಡಲಾಗಿದೆ. ಇಷ್ಟು ಪ್ರಮಾಣದ ನಗದು ಯಾಕೆ ಡ್ರಾ ಮಾಡಲಾಗಿದೆ ಎಂಬ ಬಗ್ಗೆ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ. ಜತೆಗೆ ತಮಿಳುನಾಡು ಮೂಲದ ಜೈನ್ ಟ್ರಸ್ಟ್‌ವೊಂದಕ್ಕೆ 8 ಕೋಟಿ ರು. ಹಣ ವರ್ಗಾವಣೆ ಮಾಡಿ ಟ್ರಸ್ಟ್‌ನಿಂದ ಬೇರೆಯವರಿಗೆ ಹಣ ಹಸ್ತಾಂತರಿಸಲಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಹಣಕಾಸಿನ ವ್ಯಾಪಕ ಅವ್ಯವಹಾರ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಮಠದ ಭಕ್ತಾದಿಗಳು ಮಠದಲ್ಲಿ ಪ್ರಶ್ನಿಸಿದರೂ ಯಾವುದೇ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ.