ಸಾರಾಂಶ
ಬೆಂಗಳೂರು : ಖಾಸಗಿ ಕಂಪನಿ ನೌಕರ ಅಪಾರ್ಟ್‌ಮೆಂಟ್‌ನ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೇಸ್ತ್ರೀಪಾಳ್ಯ ನಿವಾಸಿ ಅಶ್ವಿನ್ (40) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಸಂಪಿಗೆಹಳ್ಳಿ ಸಮೀಪದ ಮೇಸ್ತ್ರಿಪಾಳ್ಯದ ಅಸೆಟ್ಸ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.
ತಮಿಳುನಾಡು ಮೂಲದ ಅಶ್ವಿನ್ ನಗರದ ಕಾಲ್‌ಸೆಂಟರ್ ಕಂಪನಿಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಪತ್ನಿ, ಮೂರು ವರ್ಷ ಮಗು ಹಾಗೂ ತಾಯಿ ಜತೆಗೆ ಮೇಸ್ತ್ರಿಪಾಳ್ಯದ ಅಸೆಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಶುಕ್ರವಾರ ಸಂಜೆ ಪತ್ನಿ ಬಾಡಿಗೆ ಮನೆ ಹುಡುಕಲು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ತಾಯಿ ಮತ್ತು ಮಗು ಮನೆಯಲ್ಲಿ ಇದ್ದರು. ಆಗ ಅಶ್ವಿನ್ ಅಪಾರ್ಟ್‌ಮೆಂಟ್‌ನ 13ನೇ ಮಹಡಿಗೆ ತೆರಳಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಶ್ವಿನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಸಹ ಪತ್ತೆಯಾಗಿಲ್ಲ. ಇತ್ತೀಚೆಗೆ ಹಣಕಾಸು ಸಮಸ್ಯೆಗೆ ಸಿಲುಕಿದ್ದರು ಎಂದು ಸದ್ಯಕ್ಕೆ ತಿಳಿದು ಬಂದಿದೆ. ಈ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.