ಸಾರಾಂಶ
ನವದೆಹಲಿ: ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿಯಿರುವ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಕುಡಿವ ನೀರೊದಗಿಸುವ ಮೇಕೆದಾಟು ಯೋಜನೆ ಬಗ್ಗೆ ವೈಯಕ್ತಿಕ ಗಮನಹರಿಸಿ ಆದ್ಯತೆಯ ಮೇಲೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಅವರು ಗುರುವಾರ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮೇಕೆದಾಟು ಯೋಜನೆ ಕುರಿತು ಸುದೀರ್ಘ ಮಾತುಕತೆ ನಡೆಸಿದರು. ಮತ್ತು ಶೀಘ್ರ ಯೋಜನೆಗೆ ಅನುಮತಿ ದೊರಕಿಸಿಕೊಟ್ಟು ಬೆಂಗಳೂರಿನ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಸಹಕರಿಸುವಂತೆ ಮನವಿ ಮಾಡಿದರು.
ಅದೇ ರೀತೀ ಈಗಾಗಲೇ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಿರುವ ಬಯಲು ಸೀಮೆಯ ಬಹುಮುಖ್ಯ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ಕುರಿತು ತಾವು ವೈಯಕ್ತಿಕವಾಗಿ ಗಮನ ಹರಿ ಘೋಷಣೆಯಾಗಿರುವ ಅನುದಾನ ಒದಗಿಸಿಕೊಡುವಂತೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯದ ಬಾಕಿಯಿರುವ ಇತರ ಎಲ್ಲಾ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಜಲಶಕ್ತಿ ಸಚಿವಾಲಯಕ್ಕೆ ತಾವು ನಿರ್ದೇಶನ ನೀಡಬೇಕು. ಈ ಯೋಜನೆಗಳು ರಾಜ್ಯದ ನೀರಾವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆ ಮೂಲಕ ರೈತರ ಕಲ್ಯಾಣಕ್ಕೆ ನೆರವಾಗಲಿವೆ ಸಿಎಂ ಮನವರಿಕೆ ಮಾಡಿಕೊಟ್ಟರು.