ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಸಿಗುವ ವಿಶ್ವಾಸ : ಸಂಸದ ಡಾ. ಮಂಜುನಾಥ್

| N/A | Published : Feb 22 2025, 12:46 AM IST / Updated: Feb 22 2025, 12:35 PM IST

ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಸಿಗುವ ವಿಶ್ವಾಸ : ಸಂಸದ ಡಾ. ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

 ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಸುಮಾರು 52 ಕೋಟಿ ವೆಚ್ಚದಲ್ಲಿ ನವೀಕರಣಗೊಳುತ್ತಿರುವ ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣಗಳಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ರವರು ಶುಕ್ರವಾರ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

  ರಾಮನಗರ : ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಂತ ಹಂತವಾಗಿ ಕೆಲಸ ಆಗುತ್ತಿದೆ ಎಂದು ಸಂಸದ ಡಾ.ಸಿ.ಎನ್ .ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ನಾವು ಪ್ರಧಾನಿ ಮೋದಿಯವರ ಗಮನ ಸೆಳೆದಿದ್ದೇವೆ. ಪ್ರಧಾನಿಗಳು ನದಿ ಜೋಡಣೆ ಯೋಜನೆಗಳ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವ ವಿಶ್ವಾಸವಿದೆ ಎಂದರು.

ಕೇಂದ್ರ ನೀರಾವರಿ ಸಚಿವರನ್ನು ಭೇಟಿಯಾಗಿ ಮೇಕೆದಾಟು ಯೋಜನೆ ಸಂಬಂಧ ಚರ್ಚೆ ಮಾಡಿದ್ದೇವೆ. ಅಲ್ಲದೆ, ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸುದೀರ್ಘವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯುಪಿಎ ಅವಧಿಯಲ್ಲಿ 10 ವರ್ಷಕ್ಕೆ 85 ಸಾವಿರ ಕೋಟಿ ಹಣ ರಾಜ್ಯಕ್ಕೆ ಬಂದಿದೆ. ಆದರೆ ಕಳೆದ 10 ವರ್ಷದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 4 ಲಕ್ಷದ 96 ಸಾವಿರ ಕೋಟಿ ಹಣ ರಾಜ್ಯಕ್ಕೆ ಬಂದಿದೆ. ಯುಪಿಎ ಅವಧಿಗಿಂತ 250 ಪಟ್ಟು ಅಧಿಕ ಅನುದಾನ ಬಂದಿದೆ ಎಂದು ತಿಳಿಸಿದರು.

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಈ ವಿಚಾರವಾಗಿ ನಾನು ಸೇರಿ ಬೆಂಗಳೂರಿ‌ನ ಎಲ್ಲಾ ಸಂಸದರು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ದೇವೇಗೌಡರು ಕೂಡಾ ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಬೇಕು. ಈಗ ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ. ರಾಮನಗರ ಜಿಲ್ಲಾಸ್ಪತ್ರೆಯಲ್ಲೇ ಸಮರ್ಪಕವಾಗಿ ವೈದ್ಯರು, ನರ್ಸ್, ಟೆಕ್ನಿಷಿಯನ್ ಗಳಿಲ್ಲ.

ಇನ್ನೂ ಹೊಸ ಮೆಡಿಕಲ್ ಕಾಲೇಜಿಗೆ ಸಿಬ್ಬಂದಿಯನ್ನು ಎಲ್ಲಿ ಒದಗಿಸುತ್ತಾರೆ. ಹೊಸ ನೇಮಕಾತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಡಾ.ಮಂಜುನಾಥ್ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ದಿಶಾ ಸದಸ್ಯರಾದ ನರಸಿಂಹಮೂರ್ತಿ, ಶಿವಣ್ಣ, ಸುನೀತಾ ನಾಗರಾಜು ಇದ್ದರು.

ರಾಮನಗರ- ಚನ್ನಪಟ್ಟಣ ರೈಲು ನಿಲ್ದಾಣಗಳಿಗೆ ಭೇಟಿ :

ರಾಮನಗರ: ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಸುಮಾರು 52 ಕೋಟಿ ವೆಚ್ಚದಲ್ಲಿ ನವೀಕರಣಗೊಳುತ್ತಿರುವ ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣಗಳಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ರವರು ಶುಕ್ರವಾರ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಮೊದಲು ರಾಮನಗರ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದರು, ರೇಲ್ವೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಾಲೋಚನೆ ನಡೆಸಿದರು. ಆನಂತರ ಚನ್ನಪಟ್ಟಣ ರೇಲ್ವೆ ನಿಲ್ದಾಣಕ್ಕೂ ಭೇಟಿ ನೀಡಿದರು. ಪ್ರಸ್ತುತ ಇರುವ ರೈಲು ನಿಲ್ದಾಣಗಳನ್ನು ಉನ್ನತೀಕರಣಗೊಳಿಸಲಾಗುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸುಸ್ಸಾಜಿತವಾದ ವಿಶ್ರಾಂತಿ ಕೊಠಡಿ, ಶೌಚಾಲಯ, ಪಾದಚಾರಿ ಮೇಲ್ಸೇತುವೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಯೋಜನೆಯಡಿಯಲ್ಲಿ ಕಲ್ಪಿಸಲಾಗುತ್ತಿದೆ ಎಂದು ಸಂಸದ ಮಂಜುನಾಥ್ ತಿಳಿಸಿದರು.