ನಮ್ಮ ಸರ್ಕಾರದ ಕನಸಾದ ಮೇಕೆದಾಟು ಅಣೆಕಟ್ಟು ಯೋಜನೆ ಆರಂಭಕ್ಕೆ ಬದ್ದ: ಡಿಕೆ ಶಿವಕುಮಾರ್‌

| N/A | Published : Mar 10 2025, 12:17 AM IST / Updated: Mar 10 2025, 12:17 PM IST

dk shivakumar
ನಮ್ಮ ಸರ್ಕಾರದ ಕನಸಾದ ಮೇಕೆದಾಟು ಅಣೆಕಟ್ಟು ಯೋಜನೆ ಆರಂಭಕ್ಕೆ ಬದ್ದ: ಡಿಕೆ ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸರ್ಕಾರದ ಹಾಗೂ ನನ್ನ ವೈಯಕ್ತಿಕ ಕನಸಾದ ಮೇಕೆದಾಟು ಅಣೆಕಟ್ಟು ಯೋಜನೆ ಆರಂಭಕ್ಕೆ ಬದ್ದವಾಗಿದ್ದು, ಅದಕ್ಕೆ ಬೇಕಾದ ಕಾನೂನುಬದ್ಧವಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

 ಕನಕಪುರ : ನಮ್ಮ ಸರ್ಕಾರದ ಹಾಗೂ ನನ್ನ ವೈಯಕ್ತಿಕ ಕನಸಾದ ಮೇಕೆದಾಟು ಅಣೆಕಟ್ಟು ಯೋಜನೆ ಆರಂಭಕ್ಕೆ ಬದ್ದವಾಗಿದ್ದು, ಅದಕ್ಕೆ ಬೇಕಾದ ಕಾನೂನುಬದ್ಧವಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲೂಕಿನ ಹಾರೋಬಲೆಯಲ್ಲಿ ಮೇಕೆದಾಟು ಕಚೇರಿ ಪ್ರಾರಂಭ ಮಾಡಿ ಮಾತನಾಡಿದ ಅವರು, ಈ ಮಹತ್ವದ ಯೋಜನೆಯಿಂದ ರೈತರ ಎಷ್ಟು ಜಮೀನು ಮುಳುಗಡೆಯಾಗುತ್ತದೆ ಎಂದು ಅಂದಾಜು ಮಾಡಲು ಕಂದಾಯ ಹಾಗೂ ಅರಣ್ಯ ಅಧಿಕಾರಿಗಳು ಈಗಾಗಲೇ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ. ಕಾವೇರಿ ನದಿಯಿಂದ ನೀರನ್ನು ತಂದು ಜನರ ಬದುಕನ್ನು ಬದಲಾವಣೆ ಮಾಡುವ ದೊಡ್ಡ ಕೆಲಸ ನಡೆಯುತ್ತಿದೆ ಎಂದರು. 

ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದ ಕ್ಕಿಂತ ಆತ ಎಷ್ಟು ಜನರ ಬದುಕನ್ನ ಬದಲಾವಣೆ ಮಾಡಿದ ಎನ್ನುವುದು ಮುಖ್ಯ‌. ಕೆರೆ ತುಂಬಿಸುವ ಯೋಜನೆಯಿಂದ ಸಾವಿರಾರು ರೈತರಿಗೆ ಉಪಯೋಗವಾಗಲಿದೆ, ಈ ಭಾಗದ ಅಂತರ್ಜಲ ಹೆಚ್ಚಿ ಭೂಮಿ ಸದಾ ಹಸಿರಾಗಿ ಇರುತ್ತದೆ. ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಶ್ರಮಪಟ್ಟಿದ್ದು ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ ಎಂದರು.

 "ಚೀನಾದಿಂದ ರೇಷ್ಮೆ ಆಮದು ಕಡಿಮೆಯಾಗಿದೆ, ಆದ ಕಾರಣಕ್ಕೆ ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ಅದಕ್ಕೆ ಯಾರೂ ಸಹ ಭೂಮಿಯನ್ನು ಮಾರಾಟ ಮಾಡಲು ಹೋಗಬೇಡಿ. ಮುಂದಕ್ಕೆ ನಿಮ್ಮ ಭೂಮಿಯ ಬೆಲೆಯೂ ಹೆಚ್ಚಲಿದೆ, ಶಿಡ್ಲಘಟ್ಟ ಭಾಗದಲ್ಲಿ ನಮಗಿಂತ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಸಿಲ್ಕ್ ಮತ್ತು ಮಿಲ್ಕ್ ಅನ್ನು ಕೋಲಾರ ಭಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ ಎಂದರು.

 "ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ಸಾತನೂರು ಹೋಬಳಿಯನ್ನು ರಾಮನಗರಕ್ಕೆ ಸೇರಿಸಲು ಹೊರಟಿದ್ದರು. ಕನಕಪುರದಲ್ಲಿಯೇ ಸಾತನೂರನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳೀಯ ಮುಖಂಡರಿಂದ ದೊಡ್ಡ ಹೋರಾಟ ನಡೆದ ಕಾರಣಕ್ಕೆ ನನಗೆ ನಿಮ್ಮ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿದ್ದು ಕ್ಷೇತ್ರ ಪುನರ್ ವಿಂಗಡಣೆ ವೇಳೆ ಎಸ್.ಎಂ.ಕೃಷ್ಣ ಹಾಗೂ ಕುಲದೀಪ್ ಸಿಂಗ್ ಅವರ ಪ್ರಯತ್ನದ ಫಲವಾಗಿ ಈ ಹೋಬಳಿ ಕನಕಪುರದಲ್ಲಿಯೇ ಉಳಿಯಿತು, ಈ ಸಂದರ್ಭದಲ್ಲಿ ನನಗೆ ಆಗ ಉಂಟಾದ ಸಮಾಧಾನಕ್ಕಿಂತ ಹೆಚ್ಚು ಈಗ ಸಮಾಧಾನವಾಗುತ್ತಿದೆ. ಏಕೆಂದರೆ ಕಾವೇರಿ ಸಂಗಮದಿಂದ ನೀರು ತಂದು ಈ ಭಾಗದ 21 ಕೆರೆಗಳಿಗೆ ತುಂಬಿಸುವ ಯೋಜನೆ ನನಗೆ ತೃಪ್ತಿ ನೀಡುತ್ತಿದೆ ಎಂದರು.

 ರೈತರ ಬದುಕನ್ನು ಹಸನು ಮಾಡಬೇಕು‌ ಎಂದು ಸರ್ಕಾರದ ಮೇಲೆ ಪ್ರಭಾವ ಬೀರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರಕ್ಕೆ ತಂದಿದ್ದು ಅಂದಿನ ಹೋಬಳಿ ಉಳಿಸಿ ಹೋರಾಟ ಇಂದಿಗೆ ಫಲ ಕೊಟ್ಟಿದ್ದು ಕ್ಷೇತ್ರದ ಅನೇಕ ವಿದ್ಯಾವಂತ ಯುವಕರಿಗೆ ಅನೇಕ ಖಾಸಗಿ ಕಂಪೆನಿಗಳಲ್ಲಿ ಕೆಲಸ ಕೊಡಿಸಲಾಗಿದೆ ಇನ್ನೂ ಬಾಕಿ ಇದ್ದರೆ ಅವರಿಗೂ ಕೆಲಸ ಕೊಡಿಸಲಾಗುವುದು ಇದೇ ವೇಳೆ ಭರವಸೆ ನೀಡಿದರು.

ಮಾಜಿ ಸಂಸದ ಡಿ. ಕೆ ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಸುಧಾಮ್ ದಾಸ್, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ಜಿ.ಪಂ. ಸಿಇಒ ಅನ್ಮೋಲ್ ಜೈನ್ ಸೇರಿದಂತೆ, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಮೋಹನ್, ಬೂಹಳ್ಳಿ ಉಮೇಶ್, ಎಸ್.ಎಸ್. ಶಂಕರ್, ಸಾತನೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ನಾಗರಾಜು ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.