ರಾಜ್ಯದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಒಟ್ಟು 50 ಲಕ್ಷ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ ರೂಪಿಸಿರುವ ವಿರುದ್ಧ ಚುನಾವಣಾ ಆಯೋಗ ಸಮರ್ಪಕ ತನಿಖೆ ನಡೆಸಬೇಕು
ಬೆಂಗಳೂರು : ರಾಜ್ಯದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಒಟ್ಟು 50 ಲಕ್ಷ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ ರೂಪಿಸಿರುವ ವಿರುದ್ಧ ಚುನಾವಣಾ ಆಯೋಗ ಸಮರ್ಪಕ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಬಿಜೆಪಿ ಮತ್ತು ಜೆಡಿಎಸ್ ಕ್ರಿಮಿನಲ್ ಸಂಚು ರೂಪಿಸಿವೆ. ಚುನಾವಣಾ ಆಯೋಗದ ಫಾರಂ 7 ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಲಾಗಿದೆ. ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ವಮುದ್ರಿತ ಮಾಹಿತಿಗಳನ್ನೊಳಗೊಂಡ ಫಾರಂ 7 ಅನ್ನು ಬಿಜೆಪಿ ಕಾರ್ಯಕರ್ತರು ಬಿಎಲ್‌ಒಗಳಿಗೆ ಸಲ್ಲಿಸಿ, ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಪ್ರಯತ್ನಿಸಿದ್ದಾರೆ. ಇದು ಕ್ರಿಮಿನಲ್ ಸಂಚಾಗಿದ್ದು, ಕೋಮು ದ್ವೇಷ ಮೂಡಿಸುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಇದರ ವಿರುದ್ಧ ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ. ಅದಕ್ಕೂ ಮುನ್ನ ಚುನಾವಣಾ ಆಯೋಗ ಪ್ರಕರಣ ದಾಖಲಿಸಿಕೊಂಡು, ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವಿಜಯಪುರದಲ್ಲಿ 14,000 ಫಾರಂ 7 ಅರ್ಜಿ:
ವಿಜಯಪುರ ಜಿಲ್ಲೆಯಲ್ಲಿ 14 ಸಾವಿರ ಫಾರಂ 7 ಅರ್ಜಿಗಳನ್ನು ಬಿಜೆಪಿ ಕಾರ್ಯಕರ್ತರು ಸಲ್ಲಿಸಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿಯೇ 1634 ಅರ್ಜಿಗಳು ಸಲ್ಲಿಕೆಯಾಗಿವೆ. ಭಾಲ್ಕಿ, ನರಸಿಂಹರಾಜ, ಬೆಳಗಾವಿ ಸೇರಿ ಹಲವು ಕ್ಷೇತ್ರಗಳಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಫಾರಂ 7 ನೀಡಲಾಗಿದೆ. ಕೆಲ ಕ್ಷೇತ್ರಗಳಲ್ಲಿ 10 ಸಾವಿರಕ್ಕೂ ಹೆಚ್ಚಿನ ಮತದಾರರನ್ನು ಪಟ್ಟಿಯಿಂದ ತೆಗೆಯುವ ಸಂಚು ನಡೆದಿದೆ ಎಂದರು.
ಬಿಜೆಪಿಯ ಕಾರ್ಯಕರ್ತರು ತಮ್ಮ ಹೆಸರಿನಲ್ಲಿ ನೂರಾರು ಫಾರಂ 7ಗಳನ್ನು ಬಿಎಲ್‌ಒಗಳಿಗೆ ಸಲ್ಲಿಸಿದ್ದಾರೆ. ಕೆಲ ಕಡೆ ಬಿಜೆಪಿ ಕಾರ್ಯಕರ್ತರೇ ತಮ್ಮಿಂದ ತಪ್ಪಾಗಿರುವ ಕುರಿತು ಬಿಎಲ್‌ಒಗಳ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ, ಫಾರಂ 7ನಲ್ಲಿನ ಮುದ್ರಿತ ಅಂಶಗಳನ್ನು ಎಲ್ಲಿ ಮುದ್ರಿಸಲಾಗಿದೆ? ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬುದು ಪತ್ತೆಯಾಗಬೇಕಿದೆ. ಚುನಾವಣಾ ಆಯೋಗ ಈ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಸಿಇಒಗೆ ಮಾಹಿತಿಯಿದೆ:
ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರಿಗೆ ಮಾಹಿತಿ ಇಲ್ಲದೇ ಈ ರೀತಿ ಕೃತ್ಯ ನಡೆಯಲು ಸಾಧ್ಯವಿಲ್ಲ. ಎಸ್‌ಐಆರ್ ದೇಶದ ಅತಿದೊಡ್ಡ ವಂಚನೆಯಾಗಿದ್ದು, ಅದು ರದ್ದಾಗಬೇಕು. ಎಸ್‌ಐಆರ್ ಪ್ರಾರಂಭವಾದ ಬಳಿಕ ಸರ್ಕಾರದಿಂದ ಆಯೋಗಕ್ಕೆ ಎಲ್ಲ ಬೆಂಬಲ, ಸಹಕಾರ ನೀಡುತ್ತಿದ್ದೇವೆ. 54 ಸಾವಿರ ಬಿಎಲ್‌ಎ 2ಗಳನ್ನು ನಮ್ಮ ಪಕ್ಷದಿಂದ ನೇಮಿಸಲಾಗಿದೆ. ಆದರೆ, ಅರ್ಹ ಮತದಾರರನ್ನು ಅಕ್ರಮವಾಗಿ ತೆಗೆದುಹಾಕಲು ನಡೆಯುತ್ತಿರುವ ಕ್ರಿಮಿನಲ್ ಸಂಚು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 1.07 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆ ಪೈಕಿ 45 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಇಷ್ಟಾದ ಬಳಿಕವೂ ಬಿಜೆಪಿ ಕಾರ್ಯಕರ್ತರು 50 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಷಡ್ಯಂತ್ರ ರೂಪಿಸಿದ್ದಾರೆ. ಚುನಾವಣಾ ಆಯೋಗ ಕೂಡಲೇ ಈ ಎಲ್ಲ ಪ್ರಕರಣಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಸಮಗ್ರ ತನಿಖೆ ನಡೆಸಬೇಕು. ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದರು.
ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಡೆಯುತ್ತಿರುವ ಕ್ರಿಮಿನಲ್ ಷಡ್ಯಂತ್ರದ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಅದನ್ನು ಹೊರತುಪಡಿಸಿ ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಈ ರೀತಿ ಕ್ರಿಮಿನಲ್ ಷಡ್ಯಂತ್ರ ನಡೆಸುತ್ತಿವೆ. ಇಡೀ ದೇಶದಲ್ಲಿಯೇ ಈ ರೀತಿಯ ಕ್ರಿಮಿನಲ್‌ಗಳು ಇರಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕ್ರಿಮಿನಲ್ ಕೃತ್ಯ ನಡೆಯಲು ನಾವು ಬಿಡುವುದಿಲ್ಲ. ಅಲ್ಪಸಂಖ್ಯಾತರು, ಬಡ ಜನರ ಹಿತರಕ್ಷಣೆ ಮತ್ತು ಮತ ರಕ್ಷಣೆ ನನ್ನಿಂದಾಗುವುದಿಲ್ಲ ಎಂದರೆ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹನಲ್ಲ. ರಾಜ್ಯದ ಜನ ನನ್ನ ಮತ್ತು ನಮ್ಮ ಪಕ್ಷದ ಮೇಲೆ ಸಂಪೂರ್ಣ ವಿಶ್ವಾಸ ಇರಿಸಿ ಅಧಿಕಾರ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳುತ್ತೇವೆ ಎಂದರು.
ಸಚಿವರಾದ ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಇತರರಿದ್ದರು.
