ಸಾರಾಂಶ
ನಾಡಪ್ರಭು ಕೆಂಪೇಗೌಡ ನಿರ್ಮಿಸಿದ ಬೆಂಗಳೂರಿನ ಒಳಿತಿಗಾಗಿ ದಕ್ಷ ಮತ್ತು ಪ್ರಾಮಾಣಿಕ ಸಚಿವರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ
ಬೆಂಗಳೂರು : ನಾಡಪ್ರಭು ಕೆಂಪೇಗೌಡ ನಿರ್ಮಿಸಿದ ಬೆಂಗಳೂರಿನ ಒಳಿತಿಗಾಗಿ ದಕ್ಷ ಮತ್ತು ಪ್ರಾಮಾಣಿಕ ಸಚಿವರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಪರೋಕ್ಷವಾಗಿ ಬೆಂಗಳೂರು ಉಸ್ತುವಾರಿಯಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು ನಗರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಬರಬೇಕೆಂದು ಸಿಎಂ ಬಯಸಿದರೆ ಈ ಹಿಂದೆ ನಗರದ ಉಸ್ತುವಾರಿ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್ ಅವರನ್ನು ಮರು ನೇಮಕ ಮಾಡಬಹುದು. ಒಂದು ವೇಳೆ ಈ ಹಿಂದೆ ಉಸ್ತುವಾರಿ ಸಚಿವರಾದವರು ಬೇಡವೆಂದಾದರೆ ನಗರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇರುವ ಕೃಷ್ಣ ಬೈರೇಗೌಡ, ಎಂ.ಕೃಷ್ಣಪ್ಪ ಅಥವಾ ದಿನೇಶ್ ಗುಂಡೂರಾವ್ ಅವರಿಗೆ ಉಸ್ತುವಾರಿ ನೀಡಬಹುದಾಗಿದೆ. ಈ ಮೂಲಕ 2 ವರ್ಷದ ಕಳಂಕವನ್ನು ತೊಳೆಯಬಹುದು ಎಂಬುದು ನನ್ನ ಆಶಯ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ನೀಡಿರುವ ಅನುದಾನವನ್ನು ಖರೀದಿ ಮಾಡಲು ಹೊರ ರಾಜ್ಯದ ಗುತ್ತಿಗೆದಾರರು ಈಗಾಗಲೇ ಶೇ.12ರಷ್ಟು ಮುಂಗಡ ಹಣ ನೀಡಿದ್ದಾರೆ. ಕಾರ್ಯಾದೇಶ ಕೊಟ್ಟ ನಂತರ ಶೇ.8 ಮತ್ತು ಅನುದಾನ ಬಿಡುಗಡೆ ಮಾಡುವುದಕ್ಕೆ ಶೇ.15ರಂತೆ ಸುಮಾರು ಶೇ.35ರಷ್ಟು ಈಗಾಗಲೇ ಪಂಚತಾರಾ ಹೋಟೆಲ್‌ಗಳಲ್ಲಿ ವ್ಯವಹಾರಗಳನ್ನು ಕುದುರಿಸಿ ಮುಂಗಡ ಹಣವನ್ನು ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ವಿಸ್ ಬ್ಯಾಂಕ್ ರೀತಿ ವಸೂಲಿ
ಸಿಎಂ ಅನುದಾನ ನೀಡುವ ವೇಳೆ ತಮ್ಮ ನೇತೃತ್ವದಲ್ಲಿಯೇ ನಗರದ ಎಲ್ಲಾ ಶಾಸಕರನ್ನು ಸಭೆ ಕರೆದು ತಾವೇ ನೇರವಾಗಿ ಘೋಷಣೆ ಮಾಡಬೇಕು. 2013 ರಿಂದ 2018ರವರೆಗೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಸುಮಾರು 10ರಿಂದ 20 ವರ್ಷ ಬೆಂಗಳೂರು ಮುಂದಕ್ಕೆ ಹೋಗಿ ಹೈದರಾಬಾದ್ ಅನ್ನು ಹಿಂದಿಕ್ಕಿದ್ದೇವು. ಆದರೆ, ಪ್ರಸ್ತುತ ಕೇವಲ 2 ವರ್ಷಗಳಲ್ಲಿ ಬೆಂಗಳೂರು 20 ವರ್ಷಕ್ಕೆ ಹಿಂದೆ ಹೋಗಿದೆ. ಬೆಂಗಳೂರು ನಗರವನ್ನು ಸ್ವಿಸ್ ಬ್ಯಾಂಕ್ ಶೇಖರಣೆ ಮಾಡುವಷ್ಟು ವಸೂಲಿ ಮಾಡುತ್ತಿದ್ದಾರೆ ಎಂದು ಮುನಿರತ್ನ ದೂರಿದ್ದಾರೆ.
ಈ ಪತ್ರ ಬರೆದಿರುವುದಕ್ಕೆ ನನ್ನ ಮೇಲೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ದಲಿತ ದೌರ್ಜನ್ಯ, ಅತ್ಯಾಚಾರ, ಫೋಸ್ಕೋ ಸೇರಿದಂತೆ ಮುಂತಾದ ಸುಳ್ಳು ಆರೋಪಗಳು ದಾಖಲಾಗಬಹುದೆಂದು ನನಗೆ ಅರಿವಿದೆ. ಎಸ್.ಐ.ಟಿ ಅಧಿಕಾರಿಗಳು ಕಣ್ಣು, ಕಿವಿ. ಬಾಯಿ ಇಲ್ಲದ ಹಾಗೆ ಅವರ ವೃತ್ತಿಗಳನ್ನು ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದೂ ಅವರು ತಿಳಿಸಿದ್ದಾರೆ.