ಅನನ್ಯ ಭಟ್‌ ಕೇಸೇ ಕಟ್ಟುಕತೆ ! ಧರ್ಮಸ್ಥಳ ವಿರುದ್ಧದ ಅತಿದೊಡ್ಡ ಷಡ್ಯಂತ್ರ ಈಗ ಬಯಲು

| N/A | Published : Aug 23 2025, 05:54 AM IST

Sujatha Bhat
ಅನನ್ಯ ಭಟ್‌ ಕೇಸೇ ಕಟ್ಟುಕತೆ ! ಧರ್ಮಸ್ಥಳ ವಿರುದ್ಧದ ಅತಿದೊಡ್ಡ ಷಡ್ಯಂತ್ರ ಈಗ ಬಯಲು
Share this Article
  • FB
  • TW
  • Linkdin
  • Email

ಸಾರಾಂಶ

ಸುಜಾತಾ ಭಟ್‌  ತಪ್ಪೊಪ್ಪಿಕೊಂಡಿದ್ದು, ‘ನನಗೆ ಅನನ್ಯ ಭಟ್‌ ಎಂಬ ಮಗಳೇ ಇಲ್ಲ. ನಾನು ಈವರೆಗೂ ಹೇಳಿದ್ದೆಲ್ಲವೂ ಸುಳ್ಳು. ನಾನು ಸೃಷ್ಟಿಸಿದ ಕಟ್ಟುಕತೆ. ಗಿರೀಶ್‌ ಮಟ್ಟಣ್ಣವರ್‌, ಟಿ. ಜಯಂತ್‌ ಅವರು ನನಗೆ ಸುಳ್ಳು ಹೇಳುವಂತೆ ಹೇಳಿಕೊಟ್ಟಿದ್ದರು’ ಎಂದು ಹೇಳಿದ್ದಾರೆ.

  ಬೆಂಗಳೂರು :  ಧರ್ಮಸ್ಥಳ ಗ್ರಾಮದಲ್ಲಿ ಹಲವು ಶವಗಳನ್ನು ಹೂತಿಟ್ಟ ಪ್ರಕರಣ ದೇಶಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಅನನ್ಯಾ ಭಟ್‌ ಎಂಬ ಹೆಸರಿನ ವೈದ್ಯ ವಿದ್ಯಾರ್ಥಿನಿ ನಾಪತ್ತೆ ಕೇಸ್‌ ಸಹ ಸಾಕಷ್ಟು ಸಂಚಲನ ಮೂಡಿಸಿತ್ತು. ಆ ಕುರಿತಂತೆ ಸ್ಫೋಟಕ ಆರೋಪ ಮಾಡಿದ್ದ ‘ಅನನ್ಯ ಭಟ್‌’ ತಾಯಿ ಸುಜಾತಾ ಭಟ್‌ ಈಗ ತಪ್ಪೊಪ್ಪಿಕೊಂಡಿದ್ದು, ‘ನನಗೆ ಅನನ್ಯ ಭಟ್‌ ಎಂಬ ಮಗಳೇ ಇಲ್ಲ. ನಾನು ಈವರೆಗೂ ಹೇಳಿದ್ದೆಲ್ಲವೂ ಸುಳ್ಳು. ನಾನು ಸೃಷ್ಟಿಸಿದ ಕಟ್ಟುಕತೆ. ಗಿರೀಶ್‌ ಮಟ್ಟಣ್ಣವರ್‌, ಟಿ. ಜಯಂತ್‌ ಅವರು ನನಗೆ ಸುಳ್ಳು ಹೇಳುವಂತೆ ಹೇಳಿಕೊಟ್ಟಿದ್ದರು’ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಶುಕ್ರವಾರ ಸುಜಾತಾ ಭಟ್‌ ಸಂದರ್ಶನ ನೀಡಿದ್ದು, ‘ನನಗೆ ಅನನ್ಯ ಭಟ್‌ ಎಂಬ ಮಗಳೇ ಇಲ್ಲ. ನಾನು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ. ಈ ಪ್ರಕರಣದಲ್ಲಿ ನಾನು ಸುಳ್ಳು ಮಾಹಿತಿ ಕೊಟ್ಟಿದಕ್ಕೆ ನನ್ನ ವಯಸ್ಸು ಪರಿಗಣಿಸಿ ಕಾನೂನು ವಿನಾಯಿತಿ ಕೊಡಿ. ಅಲ್ಲದೇ ನಾನು ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ದೇಶದ ಜನರು, ಧರ್ಮಸ್ಥಳ ಭಕ್ತರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ನನಗೆ ಒಬ್ಬಳು ಮಗಳಿದ್ದಳು. ಅವಳನ್ನು ನದಿಯಲ್ಲಿ ತೇಲಿಬಿಟ್ಟಿದ್ದೆ. ಅವಳು ಮೃತಪಟ್ಟಳು ಎಂದೂ ತಿಳಿಸಿದ್ದಾರೆ.

ಮಟ್ಟಣ್ಣವರ್‌ ಸೂತ್ರಧಾರ:

ಸೌಜನ್ಯ ಪರ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌, ಟಿ. ಜಯಂತ್‌ ಅವರು ನನಗೆ ಸುಳ್ಳು ಹೇಳುವಂತೆ ಹೇಳಿ ಕೊಟ್ಟಿದ್ದಾರೆ. ಮಟ್ಟಣ್ಣವರ್‌ ಜತೆಗೆ ಕೆಲವರು ನನ್ನ ಮನೆಯನ್ನು ಹುಡುಕಿಕೊಂಡು ಬಂದು, ಹಿಂದೂ ಸನಾತನ ಧರ್ಮದ ಪ್ರಕಾರ ಮಗಳ ಅಸ್ಥಿ ಹುಡುಕಿಕೊಡುವಂತೆ ಕೇಳು ಎಂದು ಹೇಳಿ ಕೊಟ್ಟರು. ಅವರ ಒತ್ತಡಕ್ಕೆ ಮಣಿದು ನಾನು ಸುಳ್ಳು ಹೇಳಿದೆ. ಈ ಪ್ರಕರಣದಲ್ಲಿ ನನ್ನದು ತಪ್ಪಾಗಿದ್ದು, ಈಗ ಎಲ್ಲ ಕಡೆಯೂ ನನ್ನ‌ ತೇಜೋವಧೆ ಆಗಿದೆ. ನನ್ನ ಕ್ಯಾರೆಕ್ಟರ್‌ ಬಗ್ಗೆಯೇ ತಪ್ಪಾಗಿ ಹೇಳಲಾಗುತ್ತಿದೆ. ಇದು ನನಗೆ ಬೇಸರ ತಂದಿದ್ದು, ನನ್ನ ಬಿಟ್ಟು ಬಿಡಿ ಎಂದು ಸುಜಾತಾ ಭಟ್‌ ಗೋಗರೆದು ಬೇಡಿಕೊಂಡಿದ್ದಾರೆ.

ನನ್ನ ಪೂರ್ವಿಕರ ಆಸ್ತಿಯನ್ನು ನನ್ನ ಅನುಮತಿ ಪಡೆಯದೆ ನನ್ನ ಸೋದರ ಧರ್ಮಸ್ಥಳಕ್ಕೆ ನೀಡಿಬಿಟ್ಟ. ಈ ಕೋಪದಲ್ಲಿ ಧರ್ಮಸ್ಥಳ ವಿರುದ್ಧ ನಾನು ಕಟ್ಟುಕತೆಗಳನ್ನು ಹೆಣೆದೆ. ನಾನು ಧರ್ಮಸ್ಥಳ, ಮಂಜುನಾಥ ಅಥವಾ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ವೈಯಕ್ತಿಕವಾಗಿ ನಿಂದಿಸಿಲ್ಲ. ಹಣದ ಉದ್ದೇಶದಿಂದ ನಾನು ಇದೆಲ್ಲವನ್ನೂ ಮಾಡಿದ್ದೇನೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.

ಯೂಟ್ಯೂಬರ್‌ ಸಮೀರ್‌ಗೆ

ಈಗ ಮತ್ತಷ್ಟು ಸಂಕಷ್ಟ

ಧರ್ಮಸ್ಥಳ ಪ್ರಕರಣದ ಕುರಿತು ಎಐ ಬಳಸಿದ ವಿಡಿಯೋಗಳನ್ನು ಮಾಡಿ ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ‘ಧೂತ’ ಯೂಟ್ಯೂಬ್‌ ಚಾನಲ್‌ನ ಸಮೀರ್‌ ಎಂ.ಡಿ.ಗೆ ಸುಜಾತಾ ಭಟ್‌ ಹೇಳಿಕೆಯಿಂದ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.

ಕೇಸ್‌ ಹಿಂಪಡೆವೆ:

ಸುಜಾತ ಭಟ್

ಮಂಗಳೂರು: ನನ್ನ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿರುವ ಸುಜಾತಾ ಭಟ್ ಈಗ ಪ್ರಕರಣ ವಾಪಸ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

ಅನನ್ಯಾ ಭಟ್‌ ಫೋಟೋ ಕೂಡ ನಕಲಿ: ಸುಜಾತಾ

ಅನನ್ಯಾ ಭಟ್‌ ಕುರಿತು ತಾವು ಬಿಡುಗಡೆ ಮಾಡಿದ್ದ ಫೋಟೋ ಕೂಡ ನಕಲಿ. ಮಾಧ್ಯಮಗಳು ಅನನ್ಯಾ ಭಟ್‌ ಫೋಟೋ ನೀಡಲು ಒತ್ತಡ ಹೇರಿದ್ದರಿಂದಾಗಿ ನನ್ನ ಬಳಿ ಇದ್ದ ಯಾವುದೋ ಫೋಟೋವನ್ನು ನೀಡಿದೆ. ಆದರೆ ಆ ಫೋಟೋ ವಾಸಂತಿಯದ್ದಾಗಿತ್ತು ಎಂದು ಸುಜಾತಾ ಭಟ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸುಜಾತಾ ಕೇಸಲ್ಲಿ ನಾನು ತಲೆ ಹಾಕಲ್ಲ: ಜಯಂತ್‌

2 ವರ್ಷದ ಹಿಂದೆ ಸುಜಾತಾ ನನ್ನನ್ನು ಸಂಪರ್ಕಿಸಿದ್ದರು. ಅವರು ಹೇಳಿದ್ದನ್ನು ನಾನು ನಂಬಿದ್ದೆ. ಈಗ ಅದೇ ಮುಳುವಾಗಿದೆ. ನಾನಿನ್ನು ಅವರ ಪ್ರಕರಣದಲ್ಲಿ ತಲೆ ಹಾಕಲ್ಲ ಎಂದು ಹೋರಾಟಗಾರ ಜಯಂತ್‌ ತಿಳಿಸಿದ್ದಾರೆ.

Read more Articles on