ಸಾರಾಂಶ
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಗುರುವಾರ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಆಂಧ್ರಪ್ರದೇಶದಲ್ಲಿ ಕಾಡಾನೆ ಮತ್ತು ಮಾವನ ಸಂಘರ್ಷ ನಿಯಂತ್ರಣಕ್ಕೆ 8 ಕುಮ್ಕಿ (ಪಳಗಿಸಿದ) ಆನೆಗಳಿಗೆ ಬೇಡಿಕೆ ಸಲ್ಲಿಸಿದರು
ಬೆಂಗಳೂರು : ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಗುರುವಾರ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಆಂಧ್ರಪ್ರದೇಶದಲ್ಲಿ ಕಾಡಾನೆ ಮತ್ತು ಮಾವನ ಸಂಘರ್ಷ ನಿಯಂತ್ರಣಕ್ಕೆ 8 ಕುಮ್ಕಿ (ಪಳಗಿಸಿದ) ಆನೆಗಳಿಗೆ ಬೇಡಿಕೆ ಸಲ್ಲಿಸಿದರು ಹಾಗೂ ಅರಣ್ಯ ಸಂಪತ್ತು ಕಳ್ಳಸಾಗಣೆ ತಡೆ ಸೇರಿದಂತೆ ವನ್ಯಜೀವಿ ಮತ್ತು ಅರಣ್ಯ ಸಂಪತ್ತು ಸಂರಕ್ಷಣೆಗೆ ಕರ್ನಾಟಕ ಸರ್ಕಾರದ ಸಲಹೆ, ನೆರವು ಕೋರಿದರು.
ಜನಸೇನಾ ಪಕ್ಷದ ಅಧ್ಯಕ್ಷರೂ ಆದ ನಟ ಪವನ್ ಕಲ್ಯಾಣ್ ಅವರ ಪ್ರಸ್ತಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಈಶ್ವರ್ ಖಂಡ್ರೆ ಪರಿಸರ, ಅರಣ್ಯ ರಕ್ಷಣೆ ಸಂಬಂಧ ಉಭಯ ರಾಜ್ಯಗಳ ನಡುವೆ ಆ.12ಕ್ಕೆ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಉಭಯ ರಾಜ್ಯಗಳ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪವನ್ ಕಲ್ಯಾಣ್ ಮತ್ತು ಈಶ್ವರ್ ಖಂಡ್ರೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳಲ್ಲೂ ಆನೆ, ಚಿರತೆ ಮತ್ತಿತರ ನವ್ಯಜೀವಿಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಆನೆ ದಾಳಿಯಿಂದ ಸುಮಾರು 30ರಿಂದ 35 ಜನ ಸಾವನ್ನಪ್ಪಿದ್ದಾರೆ. ಅದೇ ರೀತಿ ಆಂಧ್ರದಲ್ಲೂ 3 ವರ್ಷದಲ್ಲಿ 26 ಜನ ಸಾವನ್ನಪ್ಪಿದ್ದಾರೆ. ಕಾಡಿನಿಂದ ಹೊರಬಂದ ಕಾಡಾನೆಗಳನ್ನು ಸೆರೆಯಿಡಿಯಲು ಕರ್ನಾಟಕದ ಕುಮ್ಕಿ ಆನೆಗಳು ಹೆಸರುವಾಸಿ. ಹಾಗಾಗಿ ಆಂಧ್ರ ಸರ್ಕಾರ ನಮ್ಮ ನೆರವು ಕೋರಿದೆ. ಜೊತೆಗೆ 8 ಕುಮ್ಕಿ ಆನೆಗಳನ್ನು ನೀಡುವಂತೆ ಪವನ್ ಕಲ್ಯಾಣ್ ಅವರು ಬೇಡಿಕೆ ಇಟ್ಟಿದ್ದಾರೆ. ಅಗತ್ಯ ಬಿದ್ದಾಗ ನಾವು ನೆರವು ನೀಡಲು ಸಿದ್ಧ ಎಂದರು.
ರಾಜ್ಯದಲ್ಲಿ 103 ಕುಮ್ಕಿ ಆನೆಗಳಿವೆ. ಈ ಹಿಂದೆಯೂ ಉತ್ತರ ಕನ್ನಡ, ಛತ್ತಿಸ್‌ಘಡ, ಜಾರ್ಖಂಡ್ ಸೇರಿ ವಿವಿಧ ರಾಜ್ಯಗಳಿಗೆ ಕುಮ್ಕಿ ಆನೆಗಳನ್ನು ನೀಡಿದ ಉದಾಹರಣೆಗಳಿವೆ. ಆಂಧ್ರಪ್ರದೇಶಕ್ಕೂ ದಸರಾ ಆನೆಗಳನ್ನು ಬಿಟ್ಟು ಉಳಿದ ಆನೆಗಳ ನೆರವು ನೀಡಲು ನಾವು ಸಿದ್ಧ. ಏಕೆಂದರೆ ದಸರಾ ಹಿನ್ನೆಲೆಯಲ್ಲಿ ಆನೆಗಳನ್ನು ಕಾಡಿನಿಂದ ನಾಡಿಗೆ ತರುವ ಗಜ ಪಯಣ ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಇದೇ ಆಗಸ್ಟ್ 21ರಂದು ವೀರನಹೊಸಹಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಆದರೆ, ಎಂಟು ಆನೆಗಳನ್ನು ಅವರಿಗೇ ನೀಡಬೇಕೆಂಬ ಬಗ್ಗೆ ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಇದರ ಜೊತೆಗೆ ಆನೆ ಪಳಗಿಸುವುದು, ಮಾವುತರ ತರಬೇತಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಯಶಸ್ವಿ, ಅರಣ್ಯ ಒತ್ತುವರಿ ತಡೆ, ಅರಣ್ಯ, ವನ್ಯಜೀವಿ ಸಂರಕ್ಷಣೆ, ರಕ್ತಚಂದನ ಕಳ್ಳಸಾಗಣೆ ನಿಯಂತ್ರಣ ಸೇರಿದಂತೆ ಒಟ್ಟು ಏಳು ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು ಈ ಬಗ್ಗೆ ಉಭಯ ರಾಜ್ಯಗಳ ನಡುವೆ ಆ.12ರಂದು ತಿಳವಳಿಕೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.
ನಾನು ಡಿಸಿಎಂ ಎಂಬುದಕ್ಕಿಂತ ಪರಿಸರವಾದಿ- ಪವನ್:
ಪವನ್ ಕಲ್ಯಾಣ್ ಮಾತನಾಡಿ, ನಾನು ಉಪಮುಖ್ಯಮಂತ್ರಿ ಅನ್ನುವುದಕ್ಕಿಂತ ಪರಿಸರವಾದಿಯಾಗಿದ್ದೇನೆ. ಮನುಷ್ಯ ಪ್ರಾಣಿ ಸಂಘರ್ಷ ತಡೆ, ಕುಮ್ಕಿ ಆನೆಗೆ ಬೇಡಿಕೆ, ಅರಣ್ಯ ವನ್ಯ ಜೀವಿ ಸಂಪತ್ತು ರಕ್ಷಣೆ ಸೇರಿದಂತೆ ಏಳು ವಿಷಯಗಳ ಬಗ್ಗೆ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವ ಈಶ್ವರ್ ಖಂಡ್ರೆ ಅವರು ತಮ್ಮ ಭೇಟಿಗೆ ಅವಕಾಶ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪರಿಸರ, ಪ್ರಕೃತಿ ಮತ್ತು ಅರಣ್ಯ ಸಂರಕ್ಷಣೆಗೆ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗಿರುವ ಒಲವು ಪ್ರೀತಿ ಮತ್ತು ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಖಂಡ್ರೆ ಅವರ ಮನದ ಭಾವನೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏಳು ಅಂಶಗಳ ಬಗ್ಗೆ ಆ.12ರಂದು ನಡೆಯುವ ತಿಳುವಳಿಕೆ ಒಪ್ಪಂದದ ವೇಳೆ ನಾನು ಕೂಡ ಉಪಸ್ಥಿತನಿರಲು ಪ್ರಯತ್ನಿಸುತ್ತೇನೆ ಎಂದರು.
ಕುವೆಂಪು ಕವನ ಓದಿದ ಪವನ್!
ಕನ್ನಡ ಕಲಿಯುತ್ತೇನೆ ಎಂದ ನಟ
ಇದಕ್ಕೂ ಮುನ್ನ ತೆಲುಗು ಮತ್ತು ಕನ್ನಡ ಭಾಷೆಯ ಲಿಪಿಯಲ್ಲಿ ಸಾಮ್ಯತೆ ಇದೆ ಎಂದ ಪವನ್ ಕಲ್ಯಾಣ್, ರಾಷ್ಟ್ರಕವಿ ಕುವೆಂಪು ಅವರ ‘ಅರಣ್ಯಕ್ಕೆ ಹಾಡು ಹಾಡುವ ಮುನ್ನ ನಾನು ನನ್ನ ಮನದ ಮುಂದೆ ನಿಲ್ಲುತ್ತೇನೆ’ ಎಂಬ ಸಾಲುಗಳನ್ನು ಉಲ್ಲೇಖಿಸಿ ತಮಗೆ ಈ ಸಭೆಯಿಂದ ಕನ್ನಡ ಕಲಿಯುವ ಪ್ರೇರಣೆ ಲಭಿಸಿದೆ. ನಟನಾಗಿ ನನ್ನನ್ನು ಕನ್ನಡಿಗರು ಸಾಕಷ್ಟು ಪ್ರೋತ್ಸಾಹಿಸಿದ್ದಾರೆ. ಮುಂದೆ ಕನ್ನಡ ಕಲಿತು ಮಾತನಾಡಲು ಪ್ರಯತ್ನಿಸುತ್ತೇನೆ ಎಂದರು.
ಇದೇ ವೇಳೆ, ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರನ್ನು ನೆನೆದ ಪವನ್, ರಾಜ್ ಅವರ ಗಂಧದಗುಡಿ ಚಿತ್ರವನ್ನು ಉಲ್ಲೇಖಿಸಿ ಅರಣ್ಯ ಸಂರಕ್ಷಣೆ ಸಂದೇಶ ಸಾರಿದ ಚಿತ್ರ ಎಂದರು.
ಜೊತೆಗೆ ಶ್ರೀಶೈಲ ಮತ್ತು ತಿರುಪತಿಯಲ್ಲಿ ಕರ್ನಾಟಕದ ಭಕ್ತಾದಿಗಳಿಗೆ ಅನುಕೂಲತೆ ಅತಿಥಿ ಗೃಹಗಳ ನಿರ್ಮಾಣಕ್ಕೆ ಅಗತ್ಯ ಜಾಗ ದೊರಕಿಸಿಕೊಡುವ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟದ ಮುಂದೆಯೂ ಈ ವಿಷಯ ಮಂಡಿಸುವ ಭರವಸೆ ನೀಡಿದರು.