ಸ್ವಯಂ ಸೇವಾ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ನ ಉಚಿತ ಶಿಕ್ಷಣ, ತರಬೇತಿಗೆ ಅರ್ಜಿ ಆಹ್ವಾನ

| Published : Aug 12 2024, 11:01 AM IST

education

ಸಾರಾಂಶ

  ರಾಷ್ಟ್ರೋತ್ಥಾನ ಪರಿಷತ್‌  ವಿದ್ಯಾರ್ಥಿಗಳಿಗೆ 11 ಮತ್ತು 12ನೇ ತರಗತಿ ವಿಜ್ಞಾನ ಮತ್ತು ಜೆಇಇ, ನೀಟ್‌, ಸಿಇಟಿ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ರೂಪಿಸಿರುವ ತಪಸ್‌ ಮತ್ತು ಸಾಧನಾ ಯೋಜನೆಗಳಿಗೆ ಪ್ರಸಕ್ತ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು :  ರಾಜ್ಯದ ಪ್ರಮುಖ ಸ್ವಯಂ ಸೇವಾ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್‌ ಆರ್ಥಿಕವಾಗಿ ಸಬಲರಲ್ಲದ ಹಾಗೂ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 11 ಮತ್ತು 12ನೇ ತರಗತಿ ವಿಜ್ಞಾನ ಮತ್ತು ಜೆಇಇ, ನೀಟ್‌, ಸಿಇಟಿ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ರೂಪಿಸಿರುವ ತಪಸ್‌ ಮತ್ತು ಸಾಧನಾ ಯೋಜನೆಗಳಿಗೆ ಪ್ರಸಕ್ತ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.

ತಪಸ್‌ ಗಂಡು ಮಕ್ಕಳಿಗಾಗಿ, ಸಾಧನಾ ಹೆಣ್ಣು ಮಕ್ಕಳಿಗಾಗಿ ಇರುವ ಯೋಜನೆಯಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್‌ 15ರಿಂದ ಸೆಪ್ಟಂಬರ್‌ 30ರವರೆಗೆ ಅವಕಾಶ ನೀಡಲಾಗಿದೆ. ಪರಿಷತ್‌ನ ವೆಬ್‌ಸೈಟ್‌ tapassaadhana.rashtrotthana.org ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ 9ನೇ ತರಗತಿ ಅಂಕಪಟ್ಟಿ ಮತ್ತು ವಿದ್ಯಾರ್ಥಿಯ ಫೋಟೋಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು.

ಅರ್ಜಿ ಸಲ್ಲಿಸಲು ಅರ್ಹತೆ: ಪ್ರಸಕ್ತ ಸಾಲಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯುವವರಾಗಿದ್ದು, 9ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಅಂಕಗಳನ್ನು ಪಡೆದಿರಬೇಕು. ಪೋಷಕರ ವಾರ್ಷಿಕ ವರಮಾನ 2 ಲಕ್ಷ ರು. ಮೀರಿರಬಾರದು ಎಂದು ಪರಿಷತ್‌ ಪ್ರಕಟಣೆ ತಿಳಿಸಿದೆ.

 ಹಂತದ ಪರೀಕ್ಷೆ ಮೂಲಕ ಆಯ್ಕೆ 

ತಪಸ್‌ ಮತ್ತು ಸಾಧನಾ ಯೋಜನೆಗಳಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಆಯ್ಕೆ ಶಿಬಿರ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಮೊದಲ ಹಂತದ ಪರೀಕ್ಷೆ ಅ.6ರಂದು ನಡೆಯಲಿದ್ದು, ಅದೇ ತಿಂಗಳ 15ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 2ನೇ ಹಂತದ ಪರೀಕ್ಷೆ ನ.10ರಂದು ನಡೆಯಲಿದ್ದು, ಫಲಿತಾಂಶ ಇತರೆ ಮಾಹಿತಿಯನ್ನು ನ.25ರಂದು ಪ್ರಕಟಿಸಲಾಗುವುದು. ಆಯ್ಕೆಯಾದವರಿಗೆ 11ನೇ ತರಗತಿಗೆ ಉಚಿತ ಪ್ರವೇಶ ನೀಡಿ, ಬೇಸ್‌ ಸಂಸ್ಥೆಯ ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ. ಉಚಿತ ಊಟ, ವಸತಿಯನ್ನು ಒಳಗೊಂಡ ವಿದ್ಯಾರ್ಥಿನಿಲಯದ ಪ್ರವೇಶವೂ ದೊರೆಯಲಿದೆ.