100 ಸರ್ಕಾರಿ ಬೋಧಕರ ನಿಯೋಜನೆ ರದ್ದು: ಸರ್ಕಾರ - ಕೂಡಲೇ ಮಾತೃ ಕಾಲೇಜಿಗೆ ಮರಳುವಂತೆ ಆದೇಶ

| Published : Aug 05 2024, 10:28 AM IST

Vidhan soudha

ಸಾರಾಂಶ

ಉನ್ನತ ಶಿಕ್ಷಣ ಇಲಾಖೆಯ ಸಚಿವಾಲಯ, ಆಯುಕ್ತಾಲಯ, ಇತರೆ ಕಚೇರಿ, ಅನ್ಯ ಕಾಲೇಜುಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪದವಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳ 100 ಮಂದಿ ಬೋಧಕರ ನಿಯೋಜನೆ ರದ್ದುಪಡಿಸಿರುವ ಸರ್ಕಾರ ಕೂಡಲೇ ಮಾತೃ ಕಾಲೇಜಿಗೆ ಹಿಂತಿರುಗುವಂತೆ ಆದೇಶಿಸಿದೆ.

ಬೆಂಗಳೂರು :  ಉನ್ನತ ಶಿಕ್ಷಣ ಇಲಾಖೆಯ ಸಚಿವಾಲಯ, ಆಯುಕ್ತಾಲಯ, ಇತರೆ ಕಚೇರಿ, ಅನ್ಯ ಕಾಲೇಜುಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪದವಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳ 100 ಮಂದಿ ಬೋಧಕರ ನಿಯೋಜನೆ ರದ್ದುಪಡಿಸಿರುವ ಸರ್ಕಾರ ಕೂಡಲೇ ಮಾತೃ ಕಾಲೇಜಿಗೆ ಹಿಂತಿರುಗುವಂತೆ ಆದೇಶಿಸಿದೆ.

ನಿಯೋಜನೆ ರದ್ದುಗೊಂಡವರ ಪೈಕಿ 21 ಮಂದಿ ಪಾಲಿಟೆಕ್ನಿಕ್‌ ಕಾಲೇಜುಗಳ ಶಿಕ್ಷಕರು. 79 ಮಂದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು/ಉಪನ್ಯಾಸಕರು. ಈ ಪೈಕಿ 48 ಮಂದಿ ಸಚಿವಾಲಯ ಸೇರಿದಂತೆ ಬೋಧಕೇತರ ಕಾರ್ಯಗಳಿಗೆ ನಿಯೋಜನೆಗೊಂಡಿದ್ದವರು. ವಿಶೇಷವೆಂದರೆ 31 ಮಂದಿ ಪ್ರಾಂಶುಪಾಲರುಗಳಾಗಿದ್ದಾರೆ. 31 ಮಂದಿ ಮಾತ್ರ ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ಬೋಧನಾ ಕಾರ್ಯಕ್ಕೇ ನಿಯೋಜನೆ ಪಡೆದಿದ್ದಾರೆ.

ಸರ್ಕಾರಿ ಪದವಿ, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಬೋಧಕರ ಕೊರತೆ ಇದ್ದರೂ ಹಲವು ವರ್ಷಗಳಿಂದ ತರಗತಿಯಲ್ಲಿ ಪಾಠ ಮಾಡಬೇಕಾದ ನೂರಾರು ಪ್ರಾಧ್ಯಾಪಕರು, ಪ್ರಾಂಶುಪಾಲರನ್ನು ಅನ್ಯ ಕರ್ತವ್ಯ, ಅನ್ಯ ಕಾರ್ಯದ ನಿಮಿತ್ತ ಸಚಿವಾಲಯ, ಆಯುಕ್ತಾಲಯ, ಪ್ರಾದೇಶಿಕ ಕಚೇರಿ ಸೇರಿದಂತೆ ಇತರೆ ಕಚೇರಿಗಳು ಹಾಗೂ ಬೇರೆ ಕಾಲೇಜುಗಳಿಗೆ ನಿಯೋಜಿಸಲಾಗಿತ್ತು. ಇಂತಹ ನಿಯೋಜಿತ ಬೋಧಕರು ಆಯಾ ಶೈಕ್ಷಣಿಕ ವರ್ಷದ ಬಳಿಕ ಮಾತೃ ಕಾಲೇಜಿಗೆ ಕರ್ತವ್ಯಕ್ಕೆ ವಾಪಸ್ಸಾಗಬೇಕೆಂಬ ನಿಯಮ ಇದ್ದರೂ ಇದು ಪಾಲನೆಯಾಗುತ್ತಿರಲಿಲ್ಲ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಇಂತಹ ಬೋಧಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಸಚಿವರ ಸೂಚನೆ ಮೇರೆಗೆ ಇಲಾಖೆಯು ಅಂತಹ ಎಲ್ಲ ಬೋಧಕರ ನಿಯೋಜನೆಯನ್ನು ಆ.3ರಿಂದ ರದ್ದುಪಡಿಸಿ ಕೂಡಲೇ ಮಾತೃ ಕಾಲೇಜಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.