ಸಾರಾಂಶ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭದ್ರಾವತಿಯ ಡೊಳ್ಳು ಕುಣಿತದ ತಂಡ ಪಾಲ್ಗೊಂಡಿದ್ದು, ತಂಡದ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಭದ್ರಾವತಿ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭದ್ರಾವತಿಯ ಡೊಳ್ಳು ಕುಣಿತದ ತಂಡ ಪಾಲ್ಗೊಂಡಿದ್ದು, ತಂಡದ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ನೇತೃತ್ವದ ಡೊಳ್ಳು ಕುಣಿತ ತಂಡ ಕುಂಭಮೇಳದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡುತ್ತಿದೆ. ಹೊಸನಗರ ಮಾದಾಪುರ ಗ್ರಾಮದ ಶ್ರೀ ಶನಿಪರಮೇಶ್ವರ ಯುವಕ ಸಂಘದ ಅಂತಾರಾಷ್ಟ್ರೀಯ ಜಾನಪದ ಕಲಾವಿದರಾದ ಗಿರೀಶ್ ಕುಮಾರ್ ಸೇರಿ ಒಟ್ಟು 16 ಕಲಾವಿದರ ತಂಡ ರಾಜ್ಯವನ್ನು ಪ್ರತಿನಿಧಿಸಿದೆ.
ಈ ತಂಡ ಡೊಳ್ಳು ಕುಣಿತ ಮಾತ್ರವಲ್ಲದೆ ಜಾನಪದ ಕಲಾ ಪ್ರಕಾರಗಳಾದ ಸುಗ್ಗಿ ಕುಣಿತ, ಕೋಲಾಟ, ಗೀಗಿ ಪದ, ಲಾವಣಿ, ಭಜನೆ ಮತ್ತು ಸಣ್ಣಾಟಗಳನ್ನೂ ಪ್ರದರ್ಶಿಸುತ್ತಿದೆ.