7000 ‘ಬಾಲಕ’ರಿಂದ ಬಗರ್‌ಹುಕುಂ ಅರ್ಜಿ - ಎರಡು ಲಕ್ಷ ಅರ್ಜಿ ತಿರಸ್ಕೃತ : ಕಂದಾಯ ಸಚಿವ ಕೃಷ್ಣ ಬೈರೇಗೌಡ

| Published : Dec 10 2024, 10:02 AM IST

Krishna Byre Gowda

ಸಾರಾಂಶ

ಬಗರ್‌ ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ ನಾನಾ ಕಾರಣಗಳಿಂದಾಗಿ ಎರಡು ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸಭೆ: ಬಗರ್‌ ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ ನಾನಾ ಕಾರಣಗಳಿಂದಾಗಿ ಎರಡು ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಧೀರಜ್‌ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಅವರು, ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷವಾಗಿರಬೇಕು.

 ಆದರೆ, 7000 ಅರ್ಜಿದಾರರಿಗೆ 18 ವರ್ಷ ಆಗಿಯೇ ಇಲ್ಲ. 3273 ಜನ ಅರ್ಜಿದಾರರು ಕೃಷಿಕರೇ ಅಲ್ಲ. ಸ್ಮಶಾನ, ರಸ್ತೆ, ಕೆರೆ, ಗುಂಡುತೋಪು ಮಂಜೂರಾತಿ ಕೋರಿ 27,452 ಜನ ಅರ್ಜಿ ಸಲ್ಲಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ 33,000 ಜನ ಅರ್ಜಿ ಸಲ್ಲಿಸಿದ್ದರೆ, 12,283 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಕುಟುಂಬದಲ್ಲಿ 5 ಜಮೀನು ಇದ್ದರೂ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಸಾಗುವಳಿ ಚೀಟಿ ನೀಡಲು ಬಾಕಿ ಇರುವ ಪ್ರಕರಣಗಳಲ್ಲಿ ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ರೈತರ ಸ್ವಾಧೀನ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.

ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದಂತೆ ಹಿಂದಿನಿಂದಲೂ ಅನುಸರಿಸುತ್ತಾ ಬಂದಿರುವ ಕಾನೂನನ್ನೇ ಈಗಲೂ ಅನುಸರಿಸಲಾಗುತ್ತಿದೆ. ಅಲ್ಲದೆ, ಈ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್ ತೀರ್ಪನ್ನು ಮೀರಲಾಗುವುದಿಲ್ಲ. ಆದರೂ, ರಾಜ್ಯದ ಕಾನೂನಿಗೆ ಬದ್ಧನಾಗಿ ಹೆಚ್ಚುವರಿ ಗೋಮಾಳ ಜಮೀನನ್ನು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಹಿಂದೆ ನಮೂನೆ 50-53 ರ ಅಡಿ ಭೂ ಮಂಜೂರು ಪಡೆಯದವರೂ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಕೆಲವರು ದಾಖಲೆ ಬಚ್ಚಿಟ್ಟು ರೈತರಿಗೆ ಸಮಸ್ಯೆ ನೀಡುತ್ತಿದ್ದಾರೆ. ಬಗರ್‌ ಹುಕುಂ ಯೋಜನೆ ಅಡಿಯಲ್ಲಿ ನಿಜವಾಗಿಯೂ ಭೂ ಮಂಜೂರು ಮಾಡಿರುವವರಿಗೆ ದಾಖಲೆ ಇಲ್ಲದಂತಾಗಿದೆ. ಹೀಗಾಗಿ ಜನವರಿಯಿಂದ ಎಲ್ಲಾ ತಾಲೂಕು ಕಚೇರಿಯಲ್ಲಿ ಭೂ-ಮಂಜೂರಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ತಾಲೂಕುಗಳಿಗೆ 24 ತಾಲೂಕು ಕಚೇರಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ, ಈಗಲೂ 8 ರಿಂದ 10 ತಾಲೂಕುಗಳಲ್ಲಿ ತಾಲೂಕು ಕಚೇರಿ ಕಟ್ಟಲು ಸರ್ಕಾರಿ ಜಾಗಗಳೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

18 ವರ್ಷ ತುಂಬದಿದ್ದರೂ ಅರ್ಜಿ ಸಲ್ಲಿಕೆ । ಒಟ್ಟು 2 ಲಕ್ಷ ಅರ್ಜಿ ತಿರಸ್ಕಾರ: ಕೃಷ್ಣ ಬೈರೇಗೌಡ