ಸಾರಾಂಶ
ನಗರದಲ್ಲಿ ಸುಳ್ಳು ಆಸ್ತಿ ಮಾಹಿತಿ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಪರಿಷ್ಕೃತ ಆಸ್ತಿ ಮೊತ್ತ ಪಾವತಿ ಮಾಡದಿದ್ದರೆ, ಸಂಬಂಧಪಟ್ಟ ಆಸ್ತಿಯ ಮಾರಾಟ, ವರ್ಗಾವಣೆ ತಡೆ ಹಿಡಿಯುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ನಗರದಲ್ಲಿ ಸುಳ್ಳು ಆಸ್ತಿ ಮಾಹಿತಿ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಪರಿಷ್ಕೃತ ಆಸ್ತಿ ಮೊತ್ತ ಪಾವತಿ ಮಾಡದಿದ್ದರೆ, ಸಂಬಂಧಪಟ್ಟ ಆಸ್ತಿಯ ಮಾರಾಟ, ವರ್ಗಾವಣೆ ತಡೆ ಹಿಡಿಯುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ಕೆಲವು ಆಸ್ತಿ ಮಾಲೀಕರು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕಡಿಮೆ ವಿಸ್ತೀರ್ಣದ ಆಸ್ತಿ ವಿವರವನ್ನು ಪಾಲಿಕೆಗೆ ನೀಡಿ ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ವಿಭಾಗದ ಅಧಿಕಾರಿ ಅಂತಹ ಆಸ್ತಿಗಳಿಗೆ ಆನ್‌ಲೈನ್ ಮೂಲಕ ನೋಟಿಸ್ ಜಾರಿಗೊಳಿಸಲಾಗುತ್ತಿದೆ.
ನೋಟಿಸ್ ಜಾರಿ ಮಾಡಿದ ಬಳಿಕ 15 ದಿನ ಕಾಲಾವಕಾಶ ನೀಡಲಾಗುತ್ತದೆ. ಆಸ್ತಿ ಮಾಲೀಕರು ಯಾವುದೇ ಉತ್ತರ ನೀಡದಿದ್ದರೆ, ಪಾವತಿಸಬೇಕಾದ ಬಾಕಿ ಮೊತ್ತದ ಡಿಮ್ಯಾಂಡ್ ನೋಟ್ ನೀಡಲಾಗುತ್ತದೆ. ಡಿಮ್ಯಾಂಡ್ ನೋಟ್‌ಗೆ ಅನುಗುಣವಾಗಿ 30 ದಿನದಲ್ಲಿ ಆಸ್ತಿ ತೆರಿಗೆಯ ಬಾಕಿ ಮೊತ್ತ ಪಾವತಿ ಮಾಡದಿದ್ದರೆ ಆಸ್ತಿಯನ್ನು ಬಿಬಿಎಂಪಿಯೊಂದಿಗೆ ಲಿಂಕ್ ಮಾಡಲಾಗುತ್ತದೆ. ಆಗ ಆಸ್ತಿ ಮಾಲೀಕರು ತಮ್ಮ ಆಸ್ತಿ ಮಾರಾಟ ಮಾಡುವುದು, ವರ್ಗಾವಣೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಜತೆಗೆ, ಸಂಬಂಧಪಟ್ಟ ಆಸ್ತಿಯ ಇ-ಖಾತಾ ಸಹ ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ಇಲ್ಲದಂತೆ ಮಾಡುವುದಕ್ಕೆ ನಿರ್ಧರಿಸಲಾಗಿದೆ.
ಕಾವೇರಿ ತಂತ್ರಾಂಶದಲ್ಲಿ ವಂಚನೆ ಪತ್ತೆ:
ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿ ಮಾಡುವ ಆಸ್ತಿಗಳ ವಿವರ ಮತ್ತು ಕಂದಾಯ ಇಲಾಖೆಯಲ್ಲಿ ಆಸ್ತಿ ನೋಂದಣಿ ತಂತ್ರಾಂಶದಲ್ಲಿರುವ ದಾಖಲೆಗಳನ್ನು ಪರಸ್ಪರ ಹೋಲಿಕೆ ಮಾಡಿ ಪರಿಶೀಲನೆ ಮಾಡಿದೆ. ಈ ವೇಳೆ ನಗರದ 26 ಸಾವಿರ ಆಸ್ತಿ ಮಾಲೀಕರು, ಕಾವೇರಿ ತಂತ್ರಾಂಶದಲ್ಲಿ ದಾಖಲಿಸಿರುವ ಆಸ್ತಿ ವಿಸ್ತೀರ್ಣಕ್ಕೂ ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೂ ಘೋಷಣೆ ಮಾಡಿಕೊಂಡ ವಿಸ್ತೀರ್ಣ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ಅಂತಹ ಆಸ್ತಿ ಮಾಲೀಕರಿಗೆ ಮಾತ್ರ ಇದೀಗ ನೋಟಿಸ್ ನೀಡಲಾಗುತ್ತಿದೆ.
₹836 ಕೋಟಿ ಆಸ್ತಿ ತೆರಿಗೆ ಬಾಕಿ: ಮುನೀಶ್ ಮೌದ್ಗಿಲ್
ಕೇವಲ ಸುಳ್ಳು ಆಸ್ತಿ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ವಂಚನೆ ಮಾಡಿದವರಿಗೆ ಮಾತ್ರವಲ್ಲ. ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೂ ಅದೇ ಶಿಕ್ಷೆ ನೀಡುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ. ಸದ್ಯ ನಗರದಲ್ಲಿ 3.75 ಲಕ್ಷ ಆಸ್ತಿ ಮಾಲೀಕರು ₹836 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಸದ್ಯದಲ್ಲಿ ಈ ಆಸ್ತಿ ಮಾಲೀಕರಿಗೂ ನೋಟಿಸ್ ನೀಡಲಾಗುತ್ತದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
₹3 ಸಾವಿರ ಕೋಟಿಗೂ ಅಧಿಕ ತೆರಿಗೆ ಸಂಗ್ರಹ:
ಬಿಬಿಎಂಪಿಯು 2025-26ನೇ ಸಾಲಿನಲ್ಲಿ ಒಟ್ಟು ₹6,256 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಆರ್ಥಿಕ ವರ್ಷದ ಆರಂಭ ಮೊದಲ 4 ತಿಂಗಳಿನಲ್ಲಿ ಶೇ.47.32ರಷ್ಟು ಗುರಿ ಸಾಧನೆ ಮೂಲಕ ₹3,012 ಕೋಟಿ ಸಂಗ್ರಹಿಸಿದೆ. ಮುಂದಿನ 8 ತಿಂಗಳಿನಲ್ಲಿ ಬಾಕಿ ಮೊತ್ತ ಸಂಗ್ರಹಿಸಬೇಕಾಗಿದೆ. ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 3.75 ಲಕ್ಷ ಆಸ್ತಿ ಮಾಲೀಕರಿಂದ ₹836 ಕೋಟಿ ವಸೂಲಿ ಮಾಡಬೇಕಿದೆ.