ಸಾರಾಂಶ
ರಾಜಧಾನಿ ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಒಂದೇ ಸ್ಥಳದಲ್ಲಿ ಅನುಮತಿ ಪತ್ರ ನೀಡಲು ಬಿಬಿಎಂಪಿಯ 75 ಉಪ ವಿಭಾಗ ಮಟ್ಟದಲ್ಲಿ ಏಕಗವಾಕ್ಷಿ ಕೇಂದ್ರ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಒಂದೇ ಸ್ಥಳದಲ್ಲಿ ಅನುಮತಿ ಪತ್ರ ನೀಡಲು ಬಿಬಿಎಂಪಿಯ 75 ಉಪ ವಿಭಾಗ ಮಟ್ಟದಲ್ಲಿ ಏಕಗವಾಕ್ಷಿ ಕೇಂದ್ರ ಆರಂಭಿಸುವಂತೆ ಪಾಲಿಕೆ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಈ ಕೇಂದ್ರಗಳಿಗೆ ತಲಾ ಒಬ್ಬ ಬಿಬಿಎಂಪಿ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವವರು ಸ್ಥಳದಲ್ಲಿಯೇ ಅರ್ಜಿ ಸಲ್ಲಿಕೆ ಮಾಡಿ ಪರವಾನಗಿ ಪಡೆಯಬಹುದಾಗಿದೆ.
ಗಣೇಶ ಹಬ್ಬದ ಅಂಗವಾಗಿ ವಲಯವಾರು ತಲಾ ಒಬ್ಬ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿ, ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ವಾರ್ಡಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಲು ಅಗತ್ಯ ಕ್ರಮವಹಿಸಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾತ್ರ ಪೂಜಿಸಬೇಕು, ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಪರಿಸರಕ್ಕೆ ಅಪಾಯ ಉಂಟು ಮಾಡುವ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು ನಿಯಮಾನುಸಾರ ವಿಲೇವಾರಿಗೊಳಿಸಲು ಕ್ರಮವಹಿಸಬೇಕೆಂದು ಸೂಚಿಸಲಾಗಿದೆ.
ಮನೆಗಳಲ್ಲಿ ಬಕೆಟ್‌ಗಳಲ್ಲಿ ವಿಸರ್ಜನೆ: ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಬಕೆಟ್‌ಗಳಲ್ಲಿ ವಿಸರ್ಜನೆಗೊಳಿಸಿ, ಬರುವ ಮಣ್ಣನ್ನು ಕೈತೋಟಗಳಿಗೆ, ಹೂವಿನ ಕುಂಡಗಳಿಗೆ ಬಳಸಲು ಅರಿವು ಮೂಡಿಸಬೇಕು. ದೊಡ್ಡ ಗಾತ್ರದ ಮೂರ್ತಿಗಳ ವಿಸರ್ಜನೆಗೆ ಸ್ಥಳಗಳನ್ನು ಗುರುತಿಸಿ, ಸ್ಥಳಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚುರಪಡಿಸುವುದು. ಅವಶ್ಯವಿದ್ದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಸಂಚಾರಿ ವಾಹನ ಮೂಲಕ ವಿಸರ್ಜನೆ ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪ್ರತ್ಯೇಕ ತಂಡಗಳ ನೇಮಕ: ನಗರದ ಕೆರೆ, ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಸ್ಥಳಗಳ ಸಮೀಪದಲ್ಲಿ ತಾತ್ಕಾಲಿಕ ವಿಸರ್ಜನೆ ಸ್ಥಳಗಳನ್ನು ನಿರ್ಮಿಸುವುದು. ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು ಹಾಗೂ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ವಿಂಗಡಿಸಿ ಹಸಿ ತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹಾಗೂ ಒಣತ್ಯಾಜ್ಯವನ್ನು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ರವಾನಿಸುವುದು, ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ತಂಡಗಳನ್ನು ನೇಮಿಸುವುದು. ಆಂಬ್ಯುಲೆನ್ಸ್ ವ್ಯವಸ್ಥೆ, ವೈದ್ಯರು ಮತ್ತು ಶುಶ್ರೂಷಕಿಯರನ್ನು ಪ್ರಾಥಮಿಕ ಚಿಕಿತ್ಸೆ ನೀಡಲು ನೇಮಿಸಿ, ಎಲ್ಲ ಪಿ.ಎಚ್.ಸಿ ಗಳ ಬಳಿಯಲ್ಲಿ ಹೆಚ್ಚುವರಿ ಆಂಬ್ಯುಲೆನ್ಸ್ ಹಾಗೂ ವೈದ್ಯರು ಸಿದ್ಧವಿರುವಂತೆ ಕ್ರಮವಹಿಸುವುದು ಹಾಗೂ ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ಧ್ವನಿವರ್ಧಕ ವ್ಯವಸ್ಥೆ ಮತ್ತು ನುರಿತ ಈಜುಗಾರರನ್ನು ಒಳಗೊಂಡಂತೆ ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ನಿಯೋಜನೆ ಮಾಡಲು ಸೂಚಿಸಿದ್ದಾರೆ.
- ಬಿಬಿಎಂಪಿ, ಪೊಲೀಸ್,ಅಗ್ನಿಶಾಮಕ, ಬೆಸ್ಕಾಂನಿಂದ ಒಂದೇ ಕಡೆ ಅನುಮತಿ ಪತ್ರ - ಸ್ಥಳದಲ್ಲೇ ಅರ್ಜಿ ಪಡೆಯಬಹುದು
-ಪಾಲಿಕೆಯ 75 ಉಪ ವಿಭಾಗ ಮಟ್ಟದಲ್ಲಿ ಏಕಗವಾಕ್ಷಿ ಕೇಂದ್ರ ಆರಂಭಕ್ಕೆ ಮುಖ್ಯ ಆಯುಕ್ತರ ಆದೇಶ
-ಈ ಕೇಂದ್ರಗಳಿಗೆ ನಾಲ್ಕೂ ಇಲಾಖೆಗಳಿಂದ ತಲಾ ಒಬ್ಬೊಬ್ಬ ನೋಡಲ್ ಅಧಿಕಾರಿಯ ನಿಯೋಜನೆ
- ಪರಿಸರ ಸ್ನೇಹಿ ಗಣೇಶ ಪೂಜಿಸಬೇಕು, ಪಿಒಪಿ ಮೂರ್ತಿ ತಯಾರಿಸಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲು