ಸಾರಾಂಶ
ಪದ್ಮ ಪ್ರಶಸ್ತಿ ಪುರಸ್ಕೃತರಿಂದ ರಾಜ್ಯದಲ್ಲಿ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿದೆ, ರಾಜ್ಯದ ಒಂಬತ್ತು ಮಂದಿಗೆ ಪ್ರಶಸ್ತಿ ಒಲಿದಿದೆ
ಬೆಂಗಳೂರು : ಪದ್ಮ ಪ್ರಶಸ್ತಿ ಪುರಸ್ಕೃತರಿಂದ ರಾಜ್ಯದಲ್ಲಿ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿದೆ, ರಾಜ್ಯದ ಒಂಬತ್ತು ಮಂದಿಗೆ ಪ್ರಶಸ್ತಿ ಒಲಿದಿದೆ
ನನ್ನನ್ನು ಗುರ್ತಿಸಿದ್ದು ‘ಸುವರ್ಣನ್ಯೂಸ್’
ಕಲಬುರಗಿ : ‘ನನ್ನ ಅವ್ವ ತನ್ನ ಕೊರಳಲ್ಲಿನ ತಾಳಿ ಮಾರಿ ನನಗೆ ಮೆಡಿಕಲ್ ಓದಿಸಿದ್ದಕ್ಕೂ ಸಾರ್ಥಕವಾಯಿತು’ ಎಂದು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ। ವಿಜಯಲಕ್ಷ್ಮೀ ದೇಶಮಾನೆ ಹೇಳಿದ್ದಾರೆ. ಜೊತೆಗೆ, ನನ್ನನ್ನು ಮೊದಲಿಗೆ ಗುರ್ತಿಸಿದ್ದು ‘ಸುವರ್ಣನ್ಯೂಸ್’ ಎನ್ನುವ ಮೂಲಕ ತಾವು ಏಷ್ಯಾನೆಟ್ ಸುವರ್ಣನ್ಯೂಸ್‌ನ ಸುವರ್ಣ ಕನ್ನಡಿಗ ಪ್ರಶಸ್ತಿ ಪಡೆದಿದ್ದನ್ನು ನೆನಪಿಸಿಕೊಂಡರು.
ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ತಮ್ಮ ನ್ನು ಆಯ್ಕೆ ಮಾಡಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, ತುಂಬ ಭಾವುಕರಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅಂತವರಿಂದ ಮಾತ್ರ ನನ್ನಂಥ ತಳ ಸಮುದಾಯದವರನ್ನು ಗುರುತಿಸಲು ಸಾಧ್ಯ. ನನ್ನ ಮಗಳಿಗೆ ಡಾಕ್ಟರ್ ಮಾಡಿಸ್ತೀನಿ ಎಂದು ಅಪ್ಪ, ಅಮ್ಮ ಅಂದಾಗ ಅಪ್ಪನ ಸ್ನೇಹಿತರೆಲ್ಲಾ ನಗ್ತಿದ್ದರಂತೆ. ಆಗ ಅಪ್ಪ ನನಗಾಗಿ ಹಗಲು- ರಾತ್ರಿ ಡಬಲ್ ಶಿಫ್ಟ್ ನಲ್ಲಿ ಕೆಲಸ ಮಾಡ್ತಿದ್ರು. ಅಮ್ಮ ತರಕಾರಿ ಮಾರಿ ಹಣ ಕೂಡಿಟ್ಟು, ನನ್ನನ್ನು ಓದಿಸಿದ್ರು. ಒಮ್ಮೆ ಅಮ್ಮ ನನ್ನ ಓದಿಗಾಗಿ ಹಣ ಹೊಂದಿಸಲು ತಾಳಿ ಮಾರಾಟ ಮಾಡಲು ಕೊಟ್ಟಿದ್ರು ಎಂದು ತಮ್ಮನ್ನು ಡಾಕ್ಟರ್ ಮಾಡಲು ತಂದೆ-ತಾಯಿ ಪಟ್ಟ ಶ್ರಮ ನೆನೆದು ಡಾ.ವಿಜಯಲಕ್ಷ್ಮೀ ದೇಶಮಾನೆ ಭಾವುಕರಾದರು. ಇದೇ ವೇಳೆ, ಪ್ರಶಸ್ತಿ ನೀಡಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದರು.
ಮನೆಯಲ್ಲಿ ಸಂಭ್ರಮ:
ಪ್ರಶಸ್ತಿ ಸಿಕ್ಕ ಬಳಿಕ ಅವರು ಕಲಬುರಗಿಯ ತಮ್ಮ ಸಹೋದರಿ ಮನೆಗೆ ಆಗಮಿಸಿದ್ದರು. ಪ್ರಶಸ್ತಿ ಸಿಕ್ಕ ಹಿನ್ನೆಲೆಯಲ್ಲಿ ಡಾ.ವಿಜಯಲಕ್ಷ್ಮೀ ದೇಶಮಾನೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಿಹಿ ಹಂಚಿ ಸಹೋದರಿಯರು, ಬಂಧುಗಳು ಅಭಿನಂದಿಸಿದರು.
ಶೋಷಿತ ಮಾದಿಗ ಸಮುದಾಯದಲ್ಲಿ ಹುಟ್ಟಿ, ಬಡತನದಲ್ಲೇ ಬೆಳೆದು ಎಂಬಿಬಿಎಸ್ ಮುಗಿಸಿ, ಮುಂದೆ ಕಿದ್ವಾಯಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಡಾ. ವಿಜಯಲಕ್ಷ್ಮೀ, ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ಅಬಲಾಶ್ರಮ ನಡೆಸುತ್ತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜ್ಯದ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಸಚಿವ ಪ್ರಹ್ಲಾದ್ ಜೋಶಿ ಅಭಿನಂದನೆ
ನವದೆಹಲಿ: ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದ ಕರ್ನಾಟಕದ ಸಾಧಕರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವೈಯಕ್ತಿಕವಾಗಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ಸಿನಿಮಾ ನಟ ಅನಂತ್‌ನಾಗ್, ಪದ್ಮಶ್ರೀ ಪುರಸ್ಕೃತ ಹಾಸನ ರಘು, ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ರಿಕ್ಕಿ ಕೇಜ್, ಕ್ಯಾನ್ಸರ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಸಚಿವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಜೋಶಿ, ಇವರ ಅಸಾಧಾರಣ ಸಾಧನೆ ಕರ್ನಾಟಕದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಭೀಮವ್ವಗೆ ಸನ್ಮಾನ
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಭೀಮವ್ವ ಶಿಳ್ಳಿಕ್ಯಾತರ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.