ಬೆಂಗ್ಳೂರಿನ ಭವೇಶ್‌ ರಾಜ್ಯಕ್ಕೇ ಸಿಇಟಿ ಟಾಪರ್‌

| N/A | Published : May 25 2025, 07:30 AM IST

MAH Nursing CET 2024 registration date extended
ಬೆಂಗ್ಳೂರಿನ ಭವೇಶ್‌ ರಾಜ್ಯಕ್ಕೇ ಸಿಇಟಿ ಟಾಪರ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಂಜಿನಿಯರಿಂಗ್‌ ಸೇರಿ ಆರು ವಿಭಾಗಗಳಲ್ಲಿ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳೇ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಬಿಎಸ್ಸಿ (ಕೃಷಿ) ವಿಭಾಗದ ಪ್ರಥಮ ರ್‍ಯಾಂಕ್‌ ದಕ್ಷಿಣ ಕನ್ನಡ ಜಿಲ್ಲೆಯ ಪಾಲಾಗಿದೆ.

 ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025-26ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಯುಜಿಸಿಇಟಿ-25) ಫಲಿತಾಂಶ ಶನಿವಾರ ಪ್ರಕಟವಾಗಿದೆ. ಎಂಜಿನಿಯರಿಂಗ್‌ ಸೇರಿ ಆರು ವಿಭಾಗಗಳಲ್ಲಿ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳೇ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಬಿಎಸ್ಸಿ (ಕೃಷಿ) ವಿಭಾಗದ ಪ್ರಥಮ ರ್‍ಯಾಂಕ್‌ ದಕ್ಷಿಣ ಕನ್ನಡ ಜಿಲ್ಲೆಯ ಪಾಲಾಗಿದೆ.

ವಿಶೇಷವೆಂದರೆ ಎಂಜಿನಿಯರಿಂಗ್‌, ಪಶುವೈದ್ಯಕೀಯ, ಬಿಎಸ್ಸಿ(ಕೃಷಿ), ಬಿ-ಫಾರ್ಮಾ, ಫಾರ್ಮಾ-ಡಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಬಿಎಸ್ಸಿ ನರ್ಸಿಂಗ್‌ ಈ ಎಲ್ಲಾ ಏಳೂ ವಿಭಾಗಗಳ ಟಾಪ್‌ 5 ರ್‍ಯಾಂಕ್‌ಗಳನ್ನು ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆರೇ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಈ ಪೈಕಿ ಬಹುತೇಕ ಮಂದಿ ಸಿಬಿಎಸ್‌ಇ ವಿದ್ಯಾರ್ಥಿಗಳೇ ಆಗಿದ್ದಾರೆ. ಬೆಂಗಳೂರಿನ ಭವೇಶ್‌ ಜಯಂತಿ ಅತಿ ಹೆಚ್ಚು ಫಲಿತಾಂಶದೊಂದಿಗೆ ರಾಜ್ಯಕ್ಕೆ ಟಾಪರ್‌ ಹಾಗೂ ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ವಿಶೇಷವೆಂದರೆ ಸಿಇಟಿಯ ಏಳೂ ವಿಭಾಗದ ಟಾಪ್‌-5ರಲ್ಲಿ ಬಹುತೇಕ ಗಂಡುಮಕ್ಕಳೇ ಸ್ಥಾನಪಡೆದಿದ್ದಾರೆ. ಬಿಎಸ್ಸಿ-ಕೃಷಿಯಲ್ಲಷ್ಟೇ ಒಬ್ಬ ವಿದ್ಯಾರ್ಥಿನಿ ಟಾಪ್‌-5 ರಲ್ಲಿದ್ದಾರೆ.

ಮಲ್ಲೇಶ್ವರಂನ ಪ್ರಾಧಿಕಾರದ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಈ ಬಾರಿ ಸಿಇಟಿ ಪರೀಕ್ಷೆ ಬರೆದಿದ್ದ 3,11,991 ವಿದ್ಯಾರ್ಥಿಗಳ ಪೈಕಿ 2,75,677 ಮಂದಿ ಬೇರೆ ಬೇರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಪೈಕಿ ಎಂಜಿನಿಯರಿಂಗ್‌ ಕೋರ್ಸು ಪ್ರವೇಶಕ್ಕೆ 2,62,195 ವಿದ್ಯಾರ್ಥಿಗಳು, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸು ಪ್ರವೇಶಕ್ಕೆ 1,98,679, ಬಿಎಸ್ಸಿ (ಕೃಷಿ) ಪ್ರವೇಶಕ್ಕೆ 2,14,588 ಮಂದಿ, ಪಶುವೈದ್ಯಕೀಯಕ್ಕೆ 2,18,282, ಬಿ-ಫಾರ್ಮಾಗೆ 2,66,256, ಫಾರ್ಮಾ-ಡಿ ಪ್ರವೇಶಕ್ಕೆ 2,66,757 ಮತ್ತು ಬಿಎಸ್ಸಿ ನರ್ಸಿಂಗ್‌ ಕೋರ್ಸು ಪ್ರವೇಶಕ್ಕೆ 2,08,171 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಭವೇಶ್‌ ರಾಜ್ಯಕ್ಕೆ ಟಾಪರ್‌:

ಬೆಂಗಳೂರಿನ ಮಾರತ್‌ಹಳ್ಳಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್‌ನ ಭವೇಶ್ ಜಯಂತಿ ಸಿಇಟಿಯಲ್ಲಿ ಅತಿ ಹೆಚ್ಚು ಶೇ.99.44 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್‌ ಆಗಿದ್ದಾರೆ. ಜೊತೆಗೆ ಎಂಜಿನಿಯರಿಂಗ್‌ನಲ್ಲೂ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಪಶುವೈದ್ಯಕೀಯ, ನರ್ಸಿಂಗ್ ಹಾಗೂ ನ್ಯಾಚುರೋಪಥಿ ಹಾಗೂ ಯೋಗ ವಿಜ್ಞಾನ ಈ ಮೂರೂ ವಿಭಾಗಗಳಲ್ಲಿ ಯಲಹಂಕದ ನಾರಾಯಣ ಟೆಕ್ನೋ ಶಾಲೆಯ ಹರೀಶ್‌ರಾಜ್ ಡಿ.ವಿ, ಬಿಎಸ್ಸಿ (ಕೃಷಿ) ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಅಕ್ಷಯ್ ಎಂ.ಹೆಗ್ಡೆ, ಫಾರ್ಮಾ-ಡಿ ಮತ್ತು ಬಿ-ಫಾರ್ಮಾ ವಿಭಾಗಗಳಲ್ಲಿ ಎಚ್‌ಎಸ್‌ಆರ್‌ ಲೇಔಟ್‌ನ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಆತ್ರೇಯ ವೆಂಕಟಾಚಲಮ್‌ ಟಾಪರ್ ಆಗಿದ್ದಾರೆ.

ಸಿಬಿಎಸ್‌ಇ ವಿದ್ಯಾರ್ಥಿಗಳೇ ಹೆಚ್ಚು:

ಈ ಬಾರಿಯೂ ಟಾಪರ್‌ಗಳ ಪಟ್ಟಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಎಂಜಿನಿಯರಿಂಗ್‌ನ ಟಾಪ್‌ 10 ರ್‍ಯಾಂಕ್‌ನಲ್ಲಿ ಏಳು ಜನ ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಾಗಿದ್ದಾರೆ. ನಾಲ್ಕು, ಆರು, ಏಳನೇ ಸ್ಥಾನದಲ್ಲಷ್ಟೇ ರಾಜ್ಯ ಪಠ್ಯಕ್ರಮದವರಿದ್ದಾರೆ.

ಪಶು ವೈದ್ಯಕೀಯ ಹಾಗೂ ನರ್ಸಿಂಗ್ ವಿಭಾಗದ ಟಾಪರ್‌ಗಳ ಪಟ್ಟಿ ಒಂದೇ ಆಗಿದ್ದು, ಇದರಲ್ಲಿ ಮೂರು, ಆರು ಹಾಗೂ ಹತ್ತನೇ ಸ್ಥಾನ ಪಡೆದವರು ಮಾತ್ರ ರಾಜ್ಯ ಪಠ್ಯಕ್ರಮದವರಾಗಿದ್ದಾರೆ. ಇನ್ನುಳಿದಂತೆ ಅಗ್ರಸ್ಥಾನ ಪಡೆದ ಹರೀಶ್‌ರಾಜ್ ಸೇರಿ ಇತರರು ಸಿಬಿಎಸ್‌ಇ ಪಠ್ಯಕ್ರಮದ ಕಾಲೇಜಿನವರಾಗಿದ್ದಾರೆ. ಕೃಷಿ ವಿಭಾಗದಲ್ಲಿ ಮಾತ್ರ ಎಲ್ಲ ಟಾಪರ್‌ಗಳು ರಾಜ್ಯದವರಾಗಿದ್ದು, ವಿಶೇಷವೆಂದರೆ, ಇದರಲ್ಲಿ ಏಳು ಜನರು ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನವರು.

ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ -1 ಮತ್ತು 2 ಪರೀಕ್ಷೆಗಳ ಪೈಕಿ ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಪರಿಗಣಿಸಿ ರ್‍ಯಾಂಕಿಂಗ್‌ ನೀಡಲಾಗಿದೆ. ಸಿಇಟಿ ಬರೆದಿದ್ದ ರಾಜ್ಯದ ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳ ಅಂಕಗಳನ್ನು ನೇರವಾಗಿ ಆಯಾ ಮಂಡಳಿ ವೆಬ್‌ಸೈಟ್‌ನಿಂದ ಪಡೆಯಲಾಗಿದೆ. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಮಾತ್ರ ಅಂಕ ದಾಖಲಿಸಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಉಪಸ್ಥಿತರಿದ್ದರು.

ಪ್ರಥಮ ರ್‍ಯಾಂಕ್‌ ಪಡೆದವರು

ವಿಭಾಗ ವಿದ್ಯಾರ್ಥಿ

ಎಂಜಿನಿಯರಿಂಗ್‌- ಭವೇಶ್ ಜಯಂತಿ, ಚೈತನ್ಯ ಟೆಕ್ನೋ ಸ್ಕೂಲ್, ಮಾರತ್‌ಹಳ್ಳಿ, ಬೆಂಗಳೂರು

ಬಿಎಸ್ಸಿ(ಕೃಷಿ)- ಅಕ್ಷಯ್ ಎಂ. ಹೆಗಡೆ, ಆಳ್ವಾಸ್ ಪಿಯು ಕಾಲೇಜು ಮೂಡಬಿದ್ರೆ, ಮಂಗಳೂರು

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ, ಪಶುವೈದ್ಯಕೀಯ ಮತ್ತು ನರ್ಸಿಂಗ್‌- ಹರೀಶ್‌ರಾಜ್ ಡಿ.ವಿ, ನಾರಾಯಣ ಟೆಕ್ನೋ ಸ್ಕೂಲ್, ಯಲಹಂಕ, ಬೆಂಗಳೂರು

ಬಿ ಫಾರ್ಮಾ/ಫಾರ್ಮಾ ಡಿ- ಆತ್ರೇಯ ವೆಂಕಟಾಚಲಂ, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು

ಭೌತಶಾಸ್ತ್ರದಲ್ಲಿ 1 ಕೃಪಾಂಕ

ಸಿಇಟಿ ಪರೀಕ್ಷೆಯ ಭೌತಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಮಾತ್ರ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದೆ. ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ತಲಾ ಒಂದು ಪ್ರಶ್ನೆಗೆ ನೀಡಿದ್ದ ಬಹು ಆಯ್ಕೆಯ ಉತ್ತರಗಳ ಪೈಕಿ ಎರಡೆರಡು ಸರಿಯುತ್ತರಗಳನ್ನು ಪರಿಗಣಿಸಲಾಗಿದೆ ಎಂದು ಸಚಿವ ಡಾ। ಎಂ.ಸಿ. ಸುಧಾಕರ್‌ ವಿವರಿಸಿದರು.

ಮೊದಲ ರ್‍ಯಾಂಕ್‌ ನಿರೀಕ್ಷಿಸರಲಿಲ್ಲ

ಸಿಇಟಿಯಲ್ಲಿ ರ್‍ಯಾಂಕ್‌ ನಿರೀಕ್ಷಿಸಿದ್ದೆ. ಆದರೆ, ಮೊದಲ ರ್‍ಯಾಂಕ್‌ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಪ್ರತಿ ದಿನ ಕಾಲೇಜಿನಲ್ಲಿ ಮಾಡಿದ ಪಾಠಗಳನ್ನು ಅವತ್ತೇ ಪುನರ್‌ ಅಭ್ಯಾಸ ಮಾಡಿಕೊಳ್ಳುತ್ತಿದೆ. ತಂದೆ ವೃತ್ತಿಯಲ್ಲಿ ಎಂಜಿನಿಯರ್, ತಾಯಿ ಗೃಹಿಣಿ. ಐಐಟಿಯಲ್ಲಿ ವ್ಯಾಸಂಗ ಮಾಡುವ ಆಸೆ ಇದೆ. ಜೆಇಇ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ.

- ಭವೇಶ್ ಜಯಂತಿ, ಎಂಜಿನಿಯರಿಂಗ್ ಪ್ರಥಮ ರ್‍ಯಾಂಕ್‌

Read more Articles on