ವಾಲ್ಮೀಕಿ ನಿಗಮದ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಬೆಳಗ್ಗೆ ಪ್ರತಿಪಕ್ಷ ಬಿಜೆಪಿಯಿಂದ ಪ್ರತಿಭಟನೆ ಮತ್ತು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ
ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಬೆಳಗ್ಗೆ ಪ್ರತಿಪಕ್ಷ ಬಿಜೆಪಿಯಿಂದ ಪ್ರತಿಭಟನೆ ಮತ್ತು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಳಗ್ಗೆ 9.30ಕ್ಕೆ ನಗರದ ಸ್ವಾತಂತ್ರ್ಯ ಉದ್ಯಾನವನದಿಂದ ಪ್ರತಿಭಟನೆ
ಭಾನುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಳಗ್ಗೆ 9.30ಕ್ಕೆ ನಗರದ ಸ್ವಾತಂತ್ರ್ಯ ಉದ್ಯಾನವನದಿಂದ ಪ್ರತಿಭಟನೆ ಆರಂಭಿಸಿ ವಿಧಾನಸೌಧಕ್ಕೆ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಶಾಸಕರು, ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಿರಂತರವಾಗಿ ಹೋರಾಟ ಮಾಡುತ್ತಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಗಲು- ರಾತ್ರಿ ಪ್ರತಿಭಟನೆ ನಡೆಯುತ್ತಿದೆ. ಇದನ್ನು ಇಲ್ಲಿಗೇ ಬಿಡುವ ಮಾತಿಲ್ಲ. ದಲಿತರ ಹಣ ಲೂಟಿ ಮಾಡಿದ್ದನ್ನು ರಾಜ್ಯದ ಜನರೂ ಖಂಡಿಸಿ ಪ್ರತಿಭಟಿಸುತ್ತಿದ್ದಾರೆ. ಅವರೂ ನಾಗೇಂದ್ರ ವಿರುದ್ಧ ಧ್ವನಿಯೆತ್ತಿದ್ದಾರೆ. ಇದರಿಂದ ಇಡೀ ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿದೆ ಎಂದರು.
ವಾಲ್ಮೀಕಿ ನಿಗಮದ 187 ಕೋಟಿ ರು. ಲೂಟಿ
ವಾಲ್ಮೀಕಿ ನಿಗಮದ 187 ಕೋಟಿ ರು. ಲೂಟಿ ಮಾಡಿ ಕರ್ನಾಟಕ ಮತ್ತು ತೆಲಂಗಾಣದ ಚುಣಾವಣೆಗೆ ಬಳಸಿದ್ದಕ್ಕೆ ದಾಖಲೆ ನೀಡಿದ್ದೇನೆ. ನಾವು ಹಗರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ಹೆದರಿರುವ ಆಡಳಿತ ಪಕ್ಷ ನಮ್ಮ ವಿರುದ್ಧವೇ ಪ್ರತಿಭಟನೆ ಮಾಡಲು ಬೀದಿಗಿಳಿದಿದೆ. ಸತ್ಯ ಮುಚ್ಚಿಡಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನಿಮ್ಮ ನಿಷ್ಠೆ ಯಾರ ಪರ?- ಅಶೋಕ್:
ಕಾಂಗ್ರೆಸ್ ನಾಯಕರೇ, ನಿಮ್ಮ ನಿಷ್ಠೆ ಯಾರ ಪರ? ಪರಿಶಿಷ್ಟರ ಹಿತಾಸಕ್ತಿ ಪರವೊ ಅಥವಾ ಸಂವಿಧಾನದ ಆಶಯದ ಪರವೊ ಅಥವಾ ಜನರ ಪರವೊ ಅಥವಾ ನಾಗೇಂದ್ರ ಪರವೊ ಎಂಬುದನ್ನು ತಿಳಿಸಲಿ ಎಂದು ಇದೇ ವೇಳೆ ಅಶೋಕ್ ಆಗ್ರಹಿಸಿದರು. ಗಣಿಗಾರಿಕೆ ಸೇರಿ 35ಕ್ಕೂ ಹೆಚ್ಚು ಲೂಟಿ ಮತ್ತು ಕಳ್ಳತನ ಪ್ರಕರಣದಲ್ಲಿ ನಾಗೇಂದ್ರ ಅವರು ಭಾಗಿಯಾಗಿದ್ದಾರೆ. ಸಂವಿಧಾನದ ಪ್ರಕಾರ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಆದರೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸಚಿವ ಸಂಪುಟ ಹೇಗೆ ಇರಬೇಕು ಎಂದು ಹೇಳಿದೆ. ಸಚಿವ ಸ್ಥಾನ ಕೇವಲ ಅಧಿಕಾರ ಅಲ್ಲ. ಸಾಂವಿಧಾನಿಕ ನೈತಿಕತೆ, ಸಾಂವಿಧಾನಿಕ ವಿಶ್ವಾಸ ಇರಬೇಕು. ಆದರೆ ಯಾವ ಲಕ್ಷಣವೂ ನಾಗೇಂದ್ರ ಅವರಿಗೆ ಇಲ್ಲ ಎಂದು ಪ್ರತಿಪಾದಿಸಿದರು.
