ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರ ಸಾವಿಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ ನಾಯಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರ ಸಾವಿಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ ನಾಯಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು, ಶಾಸಕರು, ಸಂಸದರು, ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆರ್‌ಸಿಬಿ ವಿಜಯೋತ್ಸವ, ಕಾಲ್ತುಳಿತ ಘಟನೆ ವಿರುದ್ಧ ಭಿತ್ತಿಫಲಕ ಪ್ರದರ್ಶಿಸಿ ಕಿಡಿಕಾರಿದರು.

ಸಿಎಂ ನಿವಾಸಕ್ಕೆ ಮುತ್ತಿಗೆಗೆ ಯತ್ನ:

ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಉದ್ಯಾನದ ಬಳಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು. ಶೇಷಾದ್ರಿ ರಸ್ತೆಗೆ ಬ್ಯಾರಿಕೇಡ್‌ ಅಡ್ಡ ಇರಿಸಿದ ಪೊಲೀಸರು ಪ್ರತಿಭಟನಾಕಾರರು ಮುಂದೆ ಹೋಗದಂತೆ ತಡೆದರು. ಆಗ ಉದ್ರಿಕ್ತ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲ ಕಾಲ ನೂಕಾಟ ತಳ್ಳಾಟ ಹಾಗೂ ಮಾತಿನ ಚಕಮಕಿಯೂ ನಡೆಯಿತು.

ಬಿಜೆಪಿ ನಾಯಕರು ಪೊಲೀಸ್‌ ವಶಕ್ಕೆ:

ಒಂದು ಹಂತದಲ್ಲಿ ಬ್ಯಾರಿಕೇಡ್‌ ತಳ್ಳಿಕೊಂಡು ಮುಖ್ಯಮಂತ್ರಿಗಳ ನಿವಾಸದತ್ತ ತೆರಳಲು ಪ್ರತಿಭಟನಾಕಾರರು ಮುಂದಾದಾಗ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು, ತಕ್ಷಣ ವಿಜಯೇಂದ್ರ, ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ಗಳಲ್ಲಿ ಕರೆದೊಯ್ದರು. ಈ ಮೂಲಕ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನ ವಿಫಲಗೊಳಿಸಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಆರ್‌ಸಿಬಿ ವಿಜಯೋತ್ಸವದ ವೇಳೆ ಅಭಿಮಾನಿಗಳನ್ನು ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಎಂದು ಕರೆದಿದ್ದಾರೆ. ಹೀಗೆ ಕರೆದು 11 ಜನರ ಪ್ರಾಣ ತೆಗೆದಿದ್ದಾರೆ. ಕಪ್‌ ಆರ್‌ಸಿಬಿಯದು. ಆದರೆ, ತಪ್ಪು ಸರ್ಕಾರದ್ದು. ಕಾಲ್ತುಳಿತ ಘಟನೆಯಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಬಲಿಪಶು ಮಾಡಿದ್ದಾರೆ. ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಏಕೆ ಅಮಾನತು ಮಾಡಲಿಲ್ಲ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಕಾಲ್ತುಳಿತ ಘಟನೆಗೆ ರಾಜ್ಯ ಸರ್ಕಾರವೇ ನೇರ ಕಾರಣ. ರಾಜ್ಯದ ಈ ಕೆಟ್ಟ ಸರ್ಕಾರವನ್ನು ತೊಲಗಿಸುವವರೆಗೂ ಹೋರಾಟ ಮುಂದುವರೆಸಬೇಕಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಶಾಪಗ್ರಸ್ತವಾಗಿದೆ ಎಂದು ಕಿಡಿಕಾರಿದರು.

ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ಪೊಲೀಸ್‌ ಇಲಾಖೆಯು ಕಾರ್ಯಕ್ರಮ ಬೇಡ ಎಂದರೂ ರಾಜ್ಯ ಸರ್ಕಾರ ಎರಡೂ ಕಡೆ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದೆ. ಪ್ರಚಾರಕ್ಕಾಗಿ ವಿಧಾನಸೌಧದ ಬಳಿ ಕಾಂಗ್ರೆಸ್‌ ಕಾರ್ಯಕ್ರಮದಂತೆ ಆರ್‌ಸಿಬಿ ತಂಡಕ್ಕೆ ಸನ್ಮಾನ ಮಾಡಿದ್ದಾರೆ. ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವ ವಿಚಾರ ಗೊತ್ತಾದರೂ ಸಹ ಕಾರ್ಯಕ್ರಮ ಮುಂದುವರೆಸಿದ್ದಾರೆ. ಇದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಎಲ್.ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಸ್.ಮುನಿರಾಜು, ಎಂ.ಕೃಷ್ಣಪ್ಪ, ಕೇಶವ ಪ್ರಸಾದ್, ಭಾರತಿ ಶೆಟ್ಟಿ, ಧೀರಜ್‌ ಮುನಿರಾಜು, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ರಾಜ್ಯ ಪದಾಧಿಕಾರಿಗಳು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ದುರಂತಕ್ಕೆ ಸರ್ಕಾರ

ನೇರ ಕಾರಣ

ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಆಹ್ವಾನ ನೀಡದಿದ್ದರೆ, ಈ ದುರಂತ ನಡೆಯುತ್ತಿರಲಿಲ್ಲ. ಬಿಜೆಪಿ ಎಲ್ಲಾ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮಾಡಲಿದೆ.

-ಆರ್.ಅಶೋಕ್‌, ಪ್ರತಿಪಕ್ಷದ ನಾಯಕ

ಸಿಎಂ, ಡಿಸಿಎಂ

ಪೈಪೋಟಿ ಕಾರಣ

ಆರ್‌ಸಿಬಿ ವಿಜಯೋತ್ಸವದ ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಪೈಪೋಟಿ ಹಾಗೂ ಹುಚ್ಚಾಟದಿಂದ 11 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ