ಪುಲಿಕೇಶಿನಗರ ಮಸೀದಿ ರಸ್ತೆಯ ‘ಕರಾಮಾ’ ಎಂಬ ರೆಸ್ಟೋರೆಂಟ್‌ ಬಳಿ ಕನ್ನಡದಲ್ಲಿ ಮಾತನಾಡಿದ ಕಾರಣಕ್ಕೆ ಕೆಲ ಕಿಡಿಗೇಡಿಗಳು ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಅವರ ಪತಿಯಾಗಿರುವ ನಟ ಭುವನ್‌ ಪೊನ್ನಣ್ಣ ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿಯಲು ಪ್ರಯತ್ನಿಸಿರುವ ಘಟನೆ ನಡೆದಿದೆ.

ಬೆಂಗಳೂರು : ಪುಲಿಕೇಶಿನಗರ ಮಸೀದಿ ರಸ್ತೆಯ ‘ಕರಾಮಾ’ ಎಂಬ ರೆಸ್ಟೋರೆಂಟ್‌ ಬಳಿ ಕನ್ನಡದಲ್ಲಿ ಮಾತನಾಡಿದ ಕಾರಣಕ್ಕೆ ಕೆಲ ಕಿಡಿಗೇಡಿಗಳು ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಅವರ ಪತಿಯಾಗಿರುವ ನಟ ಭುವನ್‌ ಪೊನ್ನಣ್ಣ ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿಯಲು ಪ್ರಯತ್ನಿಸಿರುವ ಘಟನೆ ನಡೆದಿದೆ.

ಈ ಘಟನೆ ಏ.2ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಹರ್ಷಿಕಾ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿ, ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಘಟನೆಯ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಜತೆಗೆ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?: 

‘ಒಂದೆರಡು ದಿನಗಳ ಹಿಂದೆ ಪುಲಿಕೇಶಿನಗರದ ಮಸೀದಿ ರಸ್ತೆಯ ‘ಕರಾಮಾ’ ಎಂಬ ರೆಸ್ಟೋರೆಂಟ್‌ಗೆ ಕುಟುಂಬದೊಂದಿಗೆ ಊಟಕ್ಕೆ ತೆರಳಿದ್ದೆ. ಊಟ ಮುಗಿಸಿದ ನಂತರ ನಾವು ವಾಲೆಟ್‌ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ಸ್ವೀಕರಿಸಿ ಹೊರಡುವಾಗ ಇಬ್ಬರು ವ್ಯಕ್ತಿಗಳು ಕಾರಿನ ಚಾಲಕನ ಆಸನದ ಕಿಟಕಿ ಬಳಿ ಬಂದು, ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ. ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮಗೆ ತಾಕಬಹುದು’ ಎಂದು ಹೇಳಿದರು. ಇದಕ್ಕೆ ನನ್ನ ಪತಿ ಭುವನ್‌ ಪೊನ್ನಣ್ಣ ‘ಇನ್ನೂ ಕಾರನ್ನು ಚಾಲನೆ ಮಾಡಿಲ್ಲ. ನೀವು ಜಾಗ ಬಿಡಿ’ ಎಂದು ಹೇಳಿದರು. ಬಳಿಕ ನಾವು ಕಾರನ್ನು ಸ್ಟಾರ್ಟ್‌ ಮಾಡಿ ಮುಂದಕ್ಕೆ ಚಲಾಯಿಸಿದವು. ಅಷ್ಟರೊಳಗೆ ಆ ಇಬ್ಬರು ವ್ಯಕ್ತಿಗಳು ಹಿಂದಿ ಮತ್ತು ಉರ್ದುವಿನಲ್ಲಿ ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ‘ಈ ಲೋಕಲ್‌ ಕನ್ನಡಿಗರಿಗೆ ಪಾಠ ಕಲಿಸಬೇಕು’ ಎಂದು ಭುವನ್‌ ಮುಖದ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಆದರೂ ಭುವನ್‌ ತುಂಬಾ ತಾಳ್ಮೆಯಿಂದ ಇದ್ದು ಹೆಚ್ಚು ಪ್ರತಿಕ್ರಿಯಿಸಲಿಲ್ಲ ಎಂದು ಹರ್ಷಿಕಾ ವಿವರಿಸಿದ್ದಾರೆ.

 ಚಿನ್ನದ ಸರ ಕಸಿಯಲು ಯತ್ನ: 

‘ಎರಡು-ಮೂರು ನಿಮಿಷದಲ್ಲಿ ಅದೇ ಗ್ಯಾಂಗ್‌ನ 20-30 ಸದಸ್ಯರ ಗುಂಪು ನಮ್ಮ ಕಾರಿನ ಸುತ್ತ ಜಮಾಯಿಸಿತು. ಇವರಲ್ಲಿ ಇಬ್ಬರು ಭುವನ್‌ ಕತ್ತಿಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ಭುವನ್‌, ಅವರು ಎಳೆದ ರಭಸಕ್ಕೆ ತುಂಡಾಗಿದ್ದ ಸರವನ್ನು ತೆಗೆದು ನನ್ನ ಕೈಗೆ ಕೊಟ್ಟರು. ಈ ವೇಳೆ ಆ ತಂಡವು ಚಿನ್ನದ ಸರ ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಕೈಗೆ ಸಿಗದ ಕಾರಣ ರೊಚ್ಚಿಗೆದ್ದು ಕಾರಿಗೆ ಹಾನಿ ಮಾಡಿತು. ನಮಗೆ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿತು’ ಎಂದಿದ್ದಾರೆ.

 ಹಿಂದು, ಉರ್ದುವಿನಲ್ಲಿ ಮಾತು 

‘ನಮ್ಮ ಕಾರಿನಲ್ಲಿ ಕುಟುಂಬದ ಮಹಿಳೆಯರು ಇದ್ದ ಕಾರಣ ನನ್ನ ಪತಿ ಭುವನ್‌ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನಾನು ಗಮನಿಸಿದಂತೆ ನಾನು ಮತ್ತು ಭುವನ್‌ ಕನ್ನಡದಲ್ಲಿ ಮಾತನಾಡಿದ್ದು ಆ ವ್ಯಕ್ತಿಗಳಿಗೆ ಸಮಸ್ಯೆಯಾಗಿತ್ತು. ನೀವು ನಮ್ಮ ಪ್ರದೇಶಕ್ಕೆ ಬಂದು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ, ಯೇ ಲೋಕಲ್‌ ಕನ್ನಡ್‌ ವಾಲಾ ಹೇ ಎಂದ ಅವರು, ನಿಮ್ಮ ಕನ್ನಡ ಸ್ಟೈಲ್‌ ಅನ್ನು ನೀವೇ ಇರಿಸಿಕೊಳ್ಳಿ ಎಂದರು. ಆ ಗುಂಪಿನಲ್ಲಿ ಹೆಚ್ಚಿನವರು ಹಿಂದಿ, ಉರ್ದು ಮತ್ತು ಕೆಲವರು ಸ್ವಲ್ಪ ಕನ್ನಡದಲ್ಲಿ ಮಾತನಾಡುತ್ತಿದ್ದರು’ ಎಂದು ಹರ್ಷಿಕಾ ಹೇಳಿದ್ದಾರೆ.

 ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದಾಗ ಕಾಲ್ಕಿತ್ತರು: 

‘ಈ ವೇಳೆ ನಾನು ಪರಿಸ್ಥಿತಿ ಅರಿತು ನಮಗೆ ಪರಿಚಯವಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರಿಗೆ ಕರೆ ಮಾಡಿ ಲೌಡ್‌ ಸ್ಪೀಕರ್‌ ಹಾಕಿ ಘಟನೆ ಬಗ್ಗೆ ಹೇಳಲು ಶುರು ಮಾಡಿದೆ. ಆ ಕಡೆಯಿಂದ ಇನ್ಸ್‌ಪೆಕ್ಟರ್‌ ಎಲ್ಲಿ, ಏನಾಯಿತು ಮೇಡಂ ಎಂದು ಕೇಳಿದರು. ಆಗ ಎಚ್ಚೆತ್ತುಕೊಂಡ ಆ ಮೂವರು ವ್ಯಕ್ತಿಗಳು ಸ್ಥಳದಿಂದ ಕಾಲ್ಕಿತ್ತರು. ಉಳಿದಂತೆ ಇತರೆ ಜನರು ಚದುರಿದರು. ಕೆಲವರು ಅವರು ಯಾರೆಂದು ನಮಗೆ ಗೊತ್ತಿಲ್ಲ. ನಿಮ್ಮ ರೀತಿ ಅವರೂ ಹೋಟೆಲ್‌ ಗ್ರಾಹಕರು ಇರಬಹುದು. ನೀವು ಇಲ್ಲಿಂದ ಹೊರಡಿ ಎನ್ನುತ್ತಿದ್ದರು’ ಎಂದು ಹರ್ಷಿಕಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 ನಾವು ಪಾಕಿಸ್ತಾನದಲ್ಲಿ ಇದ್ದೇವಾ?: 

‘ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ? ನಮ್ಮ ಊರಿನಲ್ಲಿ ನಾವು ಕನ್ನಡ ಮಾತನಾಡುವುದು ತಪ್ಪಾ? ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತಾ? ಇಂತಹ ಘಟನೆಗಳನ್ನು ಮುಚ್ಚಿ ಹಾಕಬೇಕಾ’ ಎಂದು ಹರ್ಷಿಕಾ ಪೂಣಚ್ಚ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ರಾಜ್ಯ ಪೊಲೀಸ್‌ ಇಲಾಖೆ ಈ ಘಟನೆ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರ್ಷಿಕಾ ಮನವಿ ಮಾಡಿದ್ದಾರೆ.

ಈ ಘಟನೆ ಹಲವು ದಿನಗಳಿಂದ ಮನಸಿನಲ್ಲಿ ಕೊರೆಯುತ್ತಿತ್ತು. ಇನ್ನು ಮುಂದೆ ಯಾರಿಗೂ ರೀತಿ ಆಗಬಾರದು ಎಂಬ ಕಾರಣಕ್ಕೆ ಯೋಚಿಸಿ ಘಟನೆ ಬಗ್ಗೆ ಹಂಚಿಕೊಂಡಿದ್ದೇನೆ. ಇನ್ನು ಪೊಲೀಸ್‌ ಠಾಣೆಗೆ ದೂರು ನೀಡುವ ಬಗ್ಗೆ ಪತಿ ಭುವನ್‌ ಪೊನ್ನಣ್ಣ ಅವರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ.

-ಹರ್ಷಿಕಾ ಪೂಣಚ್ಚ, ಚಿತ್ರನಟಿ