ಹೊಸಕೋಟೆ: ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಎಷ್ಟೇ ಕಷ್ಟ ಆದರೂ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಾನು ಬದ್ಧ. ಆದರೆ ದಾಖಲಾತಿ ಪ್ರಮಾಣವನ್ನು ನೀವು ಹೆಚ್ಚಿಸಬೇಕು ಎಂದು ಶಾಸಕ ಶರತ್ ಬಚ್ಚೆಗೌಡ ಶಾಲಾ-ಕಾಲೇಜು ಶಿಕ್ಷಕ, ಉಪನ್ಯಾಸಕರಿಗೆ ತಿಳಿಸಿದರು.

ತಾಲೂಕಿನ ಅನಗೊಂಡನಹಳ್ಳಿ ಹೋಬಳಿಯ ದೇವಲಾಪುರದಲ್ಲಿ 1.70 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಗ್ರಾಪಂಗೊಂದು ಮಾದರಿ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ದೇವಲಾಪುರವು ಒಳಗೊಂಡಿದೆ. ದಾನಿಗಳ ನೆರವಿನಿಂದ ಶಾಲಾ ಕಾಲೇಜಿಗೆ ಸಾಕಷ್ಟು ಜಾಗ ಇದೆ. ಅಗತ್ಯ ಕಟ್ಟಡವನ್ನು ಕಟ್ಟಿಸಿಕೊಡುತ್ತೇನೆ. ಅದೇ ರೀತಿ ಮಕ್ಕಳ ದಾಖಲಾತಿ ಕೂಡ ಹೆಚ್ಚಿಸಬೇಕು. ಕಟ್ಟಡ ಇದ್ದು ದಾಖಲಾತಿ ಇಲ್ಲದೆ ಮಕ್ಕಳ ಕೊರತೆ ಉಂಟಾದರೆ ಸರಿಯಲ್ಲ. ಉಪನ್ಯಾಸಕರು ಕಾರ್ಯ ಪ್ರವೃತ್ತರಾಗಿ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳು ಬರುತ್ತಾರೆ. ಆದರೆ ಅವರು ಪ್ರತಿಭೆಯಲ್ಲಿ, ಕಲಿಯುವ ಶಿಕ್ಷಣದಲ್ಲಿ ಹಿಂದುಳಿಯಬಾರದು ಎಂದು ಹೊಸಕೋಟೆ ಟೌನ್, ನಂದಗುಡಿ, ದೇವಲಾಪುರದ ಪದವಿ ಪೂರ್ವ ಕಾಲೇಜನ್ನು ಮಾದರಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಅನಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬಿಎಂ ಪ್ರಕಾಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು, ಬಿಎಂಆರ್ ಡಿಎ ಮಾಜಿ ಅಧ್ಯಕ್ಷ ಟಿಕೆಆರ್ ಕೃಷ್ಣಾರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಮಾರೆಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ್ ಇತರರು ಹಾಜರಿದ್ದರು.

ಫೋಟೋ : 24 ಹೆಚ್‌ಎಸ್‌ಕೆ 1 ಮತ್ತು 2

2: ಹೊಸಕೋಟೆ ತಾಲೂಕಿನ ದೇವಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಟಾಟನೆ ವೇಳೆ ಅಭಿಮಾನಿಗಳು ಲೈನ್ ಡ್ರಾಯಿಂಗ್ ಫೋಟೋ ನೀಡುವುದರ ಮೂಲಕ ಶರತ್ ಬಚ್ಚೇಗೌಡರನ್ನು ಅಭಿನಂದಿಸಿದರು.