ಸಾರಾಂಶ
ವಿಲ್ಸನ್ ಗಾರ್ಡನ್ ನಾಗ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರು : ಮಾದಕ ವಸ್ತು ಸಂಗ್ರಹ ಆರೋಪದ ಮೇಲೆ ರೌಡಿಶೀಟರ್ ಜೆ.ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ಆರೋಪದ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಕೋರಿ ನಾಗರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಈ ಆದೇಶ ನೀಡಿದೆ.
ತನಿಖಾಧಿಕಾರಿಗಳು ಪ್ರಕರಣ ಮೊದಲ ಆರೋಪಿಯ ತಪ್ಪೊಪ್ಪಿಗೆ ಆಧರಿಸಿ ಅರ್ಜಿದಾರ ನಾಗರಾಜು ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯಾಧಾರ ಒದಗಿಸಿಲ್ಲ. ಆದ್ದರಿಂದ ಅರ್ಜಿದಾರನನ್ನು ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಈ ಆದೇಶ ಮೊದಲ ಆರೋಪಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಪ್ಪಯ್ಯ ಅಲಿಯಾಸ್ ರಾಜು ಎಂಬಾತನನ್ನು 2021ರ ಸೆ.23ರಂದು ಬೆಂಗಳೂರಿನ ಕೋರಮಂಗಲದಲ್ಲಿ ಬಂಧಿಸಿದ್ದ ಮಾದಕವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಅಧಿಕಾರಿಗಳು, ಆರೋಪಿಯಿಂದ 12.20 ಗ್ರಾಂ ನಷ್ಟು ಎಂಡಿಎಂಎ ಜಪ್ತಿ ಮಾಡಿದ್ದರು. ತನಿಖೆ ವೇಳೆ ಅಪ್ಪಯ್ಯನ ತಪ್ಪೊಪ್ಪಿಗೆ ಹೇಳಿಕೆ ಆಧರಿಸಿ ವಿಲ್ಸನ್ ಗಾರ್ಡನ್ ನಾಗನ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿ, ಎರಡನೇ ಆರೋಪಿಯನ್ನಾಗಿ ಮಾಡಿದ್ದರು. ಅದನ್ನು ಪ್ರಶ್ನಿಸಿ ನಾಗ ಹೈಕೋರ್ಟ್ ಮೆಟ್ಟಿಲೇರಿದ್ದರು.