ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಪ್ರಕರಣ : ಬಿಗ್ ಬಾಸ್ ಖ್ಯಾತಿಯ ಡ್ರೋನ್‌ ಪ್ರತಾಪ್‌ ಬಂಧನ

| Published : Dec 13 2024, 11:07 AM IST

Drone Prathap

ಸಾರಾಂಶ

ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ಡ್ರೋನ್‌ ಪ್ರತಾಪ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು : ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ಡ್ರೋನ್‌ ಪ್ರತಾಪ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟಿಸಿ, ಅದನ್ನು ವಿಡಿಯೋ ಮಾಡಿ, ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದರು. ವಿಜ್ಞಾನ ಪ್ರಯೋಗ ಹೆಸರಲ್ಲಿ ಪ್ರತಾಪ್ ಈ ಪರೀಕ್ಷೆ ಮಾಡಿದ್ದರು. ಸೋಡಿಯಂ ಸೇರಿ ರಾಸಾಯನಿಕಗಳನ್ನು ಸೇರಿಸಿ ಕೃಷಿ ಹೊಂಡಕ್ಕೆ ಎಸೆದಿದ್ದರು. ದೊಡ್ಡ ಸ್ಫೋಟದೊಂದಿಗೆ ಅದು ಬೆಂಕಿಯ ಜ್ವಾಲೆಗಳನ್ನು ಹೊರಸೂಸಿತ್ತು. ಬಾಂಬ್ ಸ್ಫೋಟವನ್ನು ಹೋಲುವ ಈ ದೃಶ್ಯಗಳನ್ನು ಸೆರೆ ಹಿಡಿದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು.

ಪರಿಸರವಾದಿಗಳು ಮತ್ತು ಸಾರ್ವಜನಿಕರು ಇದನ್ನು ಟೀಕಿಸಿದ್ದರು. ಸಾಮಾಜಿಕ ಮಾಧ್ಯಮ ವೀಕ್ಷಣೆಗಳಿಗಾಗಿ ಇಂತಹ ಅಪಾಯಕಾರಿ ಕೃತ್ಯಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ದುಷ್ಕರ್ಮಿಗಳು ಇಂತಹ ಪ್ರದರ್ಶನಗಳ ಸಂಭಾವ್ಯ ದುರುಪಯೋಗ ಮಾಡಿಕೊಳ್ಳುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.

ಈ ಸಂಬಂಧ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮಿಡಿಗೇಶಿ ಪೊಲೀಸರು ಪ್ರತಾಪ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಿಎನ್ಎಸ್ ಕಾಯಿದೆ ಸೆಕ್ಷನ್ 288 ಮತ್ತು ಸ್ಪೋಟಕ ವಸ್ತುಗಳ ಕಾಯಿದೆ ಸೆಕ್ಷನ್ 3 ರಡಿ ಎಫ್ಐಆರ್ ದಾಖಲಿಸಿದ್ದಾರೆ.