ಸಾರಾಂಶ
ಕಾಶ್ಮೀರದ ಪಹಲ್ಗಾಂನಲ್ಲಿ 26 ಹಿಂದೂ ಪ್ರವಾಸಿಗರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಪಾಕಿಸ್ತಾನದ ಉಗ್ರಗಾಮಿಗಳ ಬಂಕರ್‌ಗಳ ಮೇಲೆ ‘ಸಿಂದೂರ’ ಕಾರ್ಯಾಚರಣೆಗೆ ರಾಜ್ಯಾದ್ಯಂತ ನಾಗರಿಕರು, ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು ಸಂಭ್ರಮಿಸಿವೆ.
ಬೆಂಗಳೂರು : ಕಾಶ್ಮೀರದ ಪಹಲ್ಗಾಂನಲ್ಲಿ 26 ಹಿಂದೂ ಪ್ರವಾಸಿಗರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಪಾಕಿಸ್ತಾನದ ಉಗ್ರಗಾಮಿಗಳ ಬಂಕರ್‌ಗಳ ಮೇಲೆ ‘ಸಿಂದೂರ’ ಕಾರ್ಯಾಚರಣೆಗೆ ರಾಜ್ಯಾದ್ಯಂತ ನಾಗರಿಕರು, ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು ಸಂಭ್ರಮಿಸಿವೆ.
ಬಿಜೆಪಿ, ಕಾಂಗ್ರೆಸ್, ವಿವಿಧ ಸಂಘಟನೆಗಳು, ನಿವೃತ್ತ ಯೋಧರು, ನಾಗರಿಕರು, ಸಂಭ್ರಮಿಸಿದರು. ಕೆಲವೆಡೆ ಪಟಾಕಿ ಸಿಡಿಸಿ ಸಂತೋಷ ವ್ಯಕ್ತಪಡಿಸಿದರೆ, ಹಲವು ಕಡೆ ಸಿಹಿ ಹಂಚಿ ಖುಷಿ ಹಂಚಿಕೊಂಡರು. ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಆನಂದಿಸಿದರು. ರಫೇಲ್ ಯುದ್ಧ ವಿಮಾನದ ಪ್ರತಿಕೃತಿಗೆ ಸಿಂದೂರ ಇಟ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಕರವೇ (ಪ್ರವೀಣ್ ಶೆಟ್ಟಿ) ಕಾರ್ಯಕರ್ತರು ಸಾರ್ವಜನಿಕರಿಗೆ ಲಾಡು ಹಂಚಿದರು. ಮಂಡ್ಯದಲ್ಲಿ ಬಿಜೆಪಿ ವತಿಯಿಂದ ರೆಫೆಲ್ ಯುದ್ಧ ವಿಮಾನದ ಮಾದರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಸಿಂದೂರ ಇಟ್ಟು ಸಿಹಿ ಹಂಚಿ ಸಂಭ್ರಮಿಸಿದರು. ಶ್ರೀರಂಗಪಟ್ಟಣದಲ್ಲಿ ಮಂಡ್ಯ ರಕ್ಷಣಾ ವೇದಿಕೆ ರಂಗನಾಥ ದೇಗುಲದಲ್ಲಿ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಿ, ಈಡುಗಾಯಿ ಒಡೆಯಲಾಯಿತು.
ಯಾದಗಿರಿಯಲ್ಲಿ ಮಾಜಿ ಸೈನಿಕ ಆನಂದ ಮಿಲ್ಟ್ರಿ ಹಾಗೂ ದೇಶ ಭಕ್ತರು ತ್ರಿವರ್ಣ ಧ್ವಜ ಹಿಡಿದು ಭಾರತೀಯ ಸೈನಿಕರಿಗೆ ಜೈಕಾರ ಹಾಕಿದರು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಹಾಲು ಪಾಯಸ, ಪೇರ್ ಪರಮಾನ್ನ’ವನ್ನು ಸವಿಯಲಾಯಿತು. ಮೈಸೂರಿನಲ್ಲಿ ಯುವ ಭಾರತ್ ಸಂಘಟನೆ ಹಾಗೂ ವೀರ ಸಾವರ್ಕರ್ ಯುವ ಬಳಗ ಧ್ವಜ ಹಿಡಿದು ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥಿಸಿತು. ಶಾಸಕ ಟಿ.ಎಸ್.ಶ್ರೀವತ್ಸ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಹಣೆಗೆ ಪರಸ್ಪರ ತಿಲಕ ಇಟ್ಟುಕೊಂಡರು.
ಶಿವಮೊಗ್ಗದಲ್ಲಿ ಪ್ರಸನ್ನ ಗಣಪತಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ, ರಾಷ್ಟ್ರ ಧ್ವಜಗಳನ್ನು ಹಿಡಿದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಹಿಂದೂ ಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ವಿಜಯೋತ್ಸವ ಆಚರಿಸಿ ಮೂವರು ಮಾಜಿ ಸೈನಿಕರಿಗೆ ಸಿಂದೂರ ಹಚ್ಚುವ ಮೂಲಕ ಸತ್ಕರಿಸಿದರು. ಧಾರವಾಡದಲ್ಲಿ ಮಾಜಿ ಸೈನಿಕರು ರಾಷ್ಟ್ರಧ್ವಜ ಕೈಯ್ಯಲ್ಲಿ ಹಿಡಿದು ವಿಜಯೋತ್ಸವ ಆಚರಿಸಿದರು. ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಹಣೆಗೆ ತಿಲಕವಿಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಜೋಯಿಡಾದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು, ಕೊಪ್ಪಳ ಹಾಗೂ ಕುಕನೂರಿನಲ್ಲಿ ನಾಗರಿಕರು ಪಟಾಕಿ ಸಿಡಿಸಿದರು. ಹೊಸಪೇಟೆಯ ವಡಕರಾಯ ದೇವಾಲಯದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಬಿಜೆಪಿ ಸಿಹಿ ಹಂಚಿತು.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನಿಗೆ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಬೆಳಗಾವಿಯಲ್ಲಿ ಮಾಜಿ ಸೈನಿಕರು ಸಿಹಿ ಹಂಚಿ ಸಂಭ್ರಮಿಸಿದರೆ, ಯುವಕರು ಪಟಾಕಿ ಸಿಡಿಸಿದರು. ಮೂಡಲಗಿ, ಹುಕ್ಕೇರಿ, ಚಿಕ್ಕೋಡಿಯಲ್ಲಿಯೂ ಸಂಭ್ರಮಾಚರಣೆ ನಡೆಯಿತು. ಬಾಗಲಕೋಟೆ, ಗುಳೇದಗುಡ್ಡ ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ, ಬಸವನ ಬಾಗೇವಾಡಿ ಹಲವಾರು ಸಂಘಟನೆಗಳು ಸಂಭ್ರಮಿಸಿದವು. ಗದಗದಲ್ಲಿ ಮಾಜಿ ಸೈನಿಕರು, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಯಘೋಷ ಮೊಳಗಿಸಿದರು. ನರಗುಂದದಲ್ಲಿ ಬಿಜೆಪಿ ಪಟಾಕಿ ಸಿಡಿಸಿತು.