ಸಾರಾಂಶ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ಶುಕ್ರವಾರದ ವೇಳೆಗೆ ಶೇ.95.20 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಶೇ.85.72 ರಷ್ಟು ಜನರ ಗಣತಿಯ ಅಂಕಿ-ಅಂಶ ಮಾತ್ರ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಭಾನುವಾರವೂ ಸಮೀಕ್ಷೆ ಮುಂದುವರೆಸಲು ನಿರ್ಧರಿಸಲಾಗಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ಶುಕ್ರವಾರದ ವೇಳೆಗೆ ಶೇ.95.20 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಶೇ.85.72 ರಷ್ಟು ಜನರ ಗಣತಿಯ ಅಂಕಿ-ಅಂಶ ಮಾತ್ರ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಭಾನುವಾರವೂ ಸಮೀಕ್ಷೆ ಮುಂದುವರೆಸಲು ನಿರ್ಧರಿಸಲಾಗಿದೆ.
ಪೂರ್ವ ನಿಗದಿಯಂತೆ ಅ.18 ರಂದು ಶನಿವಾರಕ್ಕೆ (ಇಂದಿಗೆ) ಸಮೀಕ್ಷೆ ಪೂರ್ಣಗೊಳ್ಳಬೇಕು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜನಸಂಖ್ಯೆಯ ಗಣತಿ ಆಗಿಲ್ಲ. ಹೀಗಾಗಿ ಅ.19 ರಂದು ಭಾನುವಾರವೂ ಸಮೀಕ್ಷೆ ಮುಂದುವರೆಸಲು ತಿಳಿಸಿದ್ದು, ಭಾನುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಸಮೀಕ್ಷೆಯನ್ನು ಮುಂದುವರೆಸಬೇಕೇ ಅಥವಾ ಮುಕ್ತಾಯಗೊಳಿಸಬೇಕೇ ಎಂಬ ಕುರಿತು ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜಿಬಿಎ ಹೊರತುಪಡಿಸಿ ರಾಜ್ಯಾದ್ಯಂತ ಒಟ್ಟು 1,48,14,286 ಕುಟುಂಬಗಳ ಸಮೀಕ್ಷೆ ಗುರಿ ನೀಡಲಾಗಿತ್ತು. ಈ ಪೈಕಿ ಶುಕ್ರವಾರ 1.62 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಒಟ್ಟು 1.41 ಕೋಟಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಹೀಗಾಗಿ ಮನೆಗಳ ಪೈಕಿ ಶೇ.95.20 ರಷ್ಟು ಉತ್ತಮ ಪ್ರಗತಿ ಸಾಧಿಸಲಾಗಿದೆ. ಆದರೆ ಜನಸಂಖ್ಯೆ ಪೈಕಿ 5,22,64,067 ಜನಸಂಖ್ಯೆಯ ಸಮೀಕ್ಷೆ ಮಾತ್ರ ನಡೆಸಿದ್ದು, ಒಟ್ಟು ಗುರಿಯ ಶೇ.85.72 ರಷ್ಟು ಸಾಧನೆ ಮಾತ್ರ ಮಾಡಲಾಗಿದೆ.
ಸಮೀಕ್ಷೆ ಆರಂಭದಲ್ಲಿ ಕುಟುಂಬಗಳ ಒಟ್ಟು ಜನರ ಮಾಹಿತಿ ಸಂಗ್ರಹಿಸಿಲ್ಲ. ಬದಲಿಗೆ 2-3 ಮಂದಿ ಮಾಹಿತಿ ಅಥವಾ ಸಮೀಕ್ಷೆ ವೇಳೆ ಆಧಾರ್ ಲಭ್ಯವಿರುವ ಸದಸ್ಯರ ಮಾಹಿತಿ ಮಾತ್ರ ಪಡೆಯಲಾಗಿತ್ತು. ಇದನ್ನು ಪುನರ್ ಸಮೀಕ್ಷೆ ನಡೆಸಿ ಎಲ್ಲರ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ. ಹೀಗಾಗಿ ಭಾನುವಾರದವರೆಗೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಶೇ.38,34 ರಷ್ಟು ಪ್ರಗತಿ:
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 39,82,335 ಕುಟುಂಬಗಳ ಸಮೀಕ್ಷೆ ಗುರಿ ನಿಗದಿ ಮಾಡಲಾಗಿತ್ತು. ಶುಕ್ರವಾರ 93,155 ಕುಟುಂಬಗಳ ಸಮೀಕ್ಷೆ ನಡೆಸಿದ್ದು ಒಟ್ಟು 17,20,560 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಂತಾಗಿದೆ. ಈ ಮೂಲಕ ಶೇ.38.34 ರಷ್ಟು ಪ್ರಗತಿ ಸಾಧಿಸಿದೆ. ಜಿಬಿಎ ವ್ಯಾಪ್ತಿಯಲ್ಲಿ ಅ.24 ರವರೆಗೂ ಸಮೀಕ್ಷೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.