ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದ್ದು ಇಂದು, ನಾಳೆ ಎಂಬ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದ್ದು ಇಂದು, ನಾಳೆ ಎಂಬ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೋಮವಾರದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಸರ್ಕಾರದ ಅವಧಿ ಇಂದು ಅಥವಾ ನಾಳೆ ಎಂಬ ಸ್ಥಿತಿಗೆ ಬಂದು ನಿಂತಿದೆ ಎಂದು ವಾಗ್ದಾಳಿ ನಡೆಸಿದರು. ನಿಮ್ಮ ನೋವಿನಲ್ಲಿ ನನಗೂ ಪಾಲಿದೆ. ನಿಮ್ಮ ಹೋರಾಟದಲ್ಲಿ ಜೊತೆಗೂಡುವೆ. ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬೇಡಿಕೆಗಳನ್ನು ಈಡೇರಿಸಲು ನಿಮ್ಮ ಸಂಘದ ಸದಸ್ಯನಂತೆ ಹೋರಾಟ ನಡೆಸುತ್ತೇನೆ. ಸಂಸದ ಡಾ.ಮಂಜುನಾಥ್ ಅವರಿಂದ ಬೇಡಿಕೆಗಳ ಬಗ್ಗೆ ವಿವರ ಪಡೆದುಕೊಳ್ಳುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆಗೂ ಚರ್ಚಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಆರೋಗ್ಯ ಸಚಿವರಾಗಲು ಯೋಗ್ಯತೆಯಿಲ್ಲ:
ದಿನೇಶ್ ಗುಂಡೂರಾವ್ ವೈದ್ಯರೇನೂ ಅಲ್ಲ, ಆರೋಗ್ಯ ಸಚಿವರಾಗುವ ಯೋಗ್ಯತೆ ಅವರಿಗೆ ಇಲ್ಲ. ದನಗಳಿಗೆ ನೀಡುವ ಔಷಧಿಯನ್ನೂ ಜನರಿಗೆ ಕೊಡುತ್ತಿದ್ದಾರೆ. ಕಳಪೆ ಔಷಧಿ ಖರೀದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ಡಾ.ಮಂಜುನಾಥ್ ಮಾತನಾಡಿ, ನಾವು ನಿಮ್ಮ ಜೊತೆ ಇದ್ದೇವೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿಸುವುದು, ಕೆಲಸ ಕಾಯಂ ಮಾಡುವ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ನರ್ಸ್‍ಗಳು, ತಂತ್ರಜ್ಞರು ಸೇರಿದಂತೆ ವೈದ್ಯೇತರ ಸಿಬ್ಬಂದಿ ಆರೋಗ್ಯ ವ್ಯವಸ್ಥೆಯಲ್ಲಿ ಅತ್ಯಂತ ಅನಿವಾರ್ಯ ಎಂದು ತಿಳಿಸಿದರು.
ಸೇವೆ ಕಾಯಂಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಸೋಮವಾರದಿಂದ ಗುತ್ತಿಗೆ ಶುಶ್ರೂಷಾಧಿಕಾರಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಮಹಾ ಶಿವರಾತ್ರಿ ಹಬ್ಬವಾದ ಬುಧವಾರವೂ ಹೋರಾಟ ಮುಂದುವರೆಸಿದ್ದಾರೆ.
ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.