ಸಾರಾಂಶ
ರಾಜ್ಯದಲ್ಲಿ ಎಚ್ಎಂಪಿವಿ ಸೋಂಕು ದೃಢಪಟ್ಟ ಬೆನ್ನಲ್ಲೇ ಎಚ್‌ಎಂಪಿವಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಲಹೆಗಳನ್ನು ನೀಡಿದೆ.
, ಬೆಂಗಳೂರು : ರಾಜ್ಯದಲ್ಲಿ ಎಚ್ಎಂಪಿವಿ ಸೋಂಕು ದೃಢಪಟ್ಟ ಬೆನ್ನಲ್ಲೇ ಎಚ್‌ಎಂಪಿವಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಲಹೆಗಳನ್ನು ನೀಡಿದೆ.
ರಾಜ್ಯ ಸರ್ಕಾರವು 2023ರ ಡಿಸೆಂಬರ್‌ನಲ್ಲಿ ವರದಿಯಾಗಿದ್ದ ಇನ್‌ಫ್ಲ್ಯುಯೆಂಜಾ ಮಾದರಿ ಅನಾರೋಗ್ಯ (ಐಎಲ್‌ಐ) ಪ್ರಕರಣ ಹಾಗೂ 2024 ರ ಡಿಸೆಂಬರ್ ಪ್ರಕರಣಗಳನ್ನು ಪರಿಶೀಲಿಸಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ. ಆದರೂ, ಸುರಕ್ಷತೆಗಾಗಿ ಸಾಮಾನ್ಯ ಮುನ್ನೆಚ್ಚರಿಕಾ ಕ್ರಮ ಪಾಲಿಸುವಂತೆ ತಿಳಿಸಿದೆ.
ಸೋಂಕಿನ ಲಕ್ಷಣಗಳೇನು?:
ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಉಸಿರಾಟ ಸಮಸ್ಯೆಯು ಸೋಂಕಿನ ಪ್ರಮುಖ ಲಕ್ಷಣಗಳು. ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶ ಸೋಂಕು ಅಥವಾ ನ್ಯುಮೋನಿಯಾ ಸಹ ಉಂಟಾಗಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪುಟ್ಟ ಮಕ್ಕಳು ಹಾಗೂ ವೃದ್ಧರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.
ಸೋಂಕು ಹೇಗೆ ಹರಡುತ್ತದೆ?:
ವೈರಾಣು ಸೋಂಕಿತರು ಕೆಮ್ಮು, ಸೀನುವಾಗ ಬೀಳುವ ದ್ರಾವಣದ ಕಣಗಳಿಂದ (ಡ್ರಾಪ್ಲೆಟ್ಸ್) ಎಚ್‌ಎಂಪಿವಿ ಹರಡುತ್ತದೆ. ಜತೆಗೆ ಸೋಂಕಿತರ ನಿಕಟ ಸಂಪರ್ಕ, ವೈರಾಣು ಇರುವ ಜಾಗ ಮುಟ್ಟಿ ಪದೇ ಪದೇ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ.
ಏನು ಮಾಡಬೇಕು?
- ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಲ್ಲಿ ಮುಚ್ಚಿಕೊಳ್ಳಬೇಕು
-ಆಗಾಗ್ಗೆ ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು
-ಅನಗತ್ಯವಾಗಿ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು
- ಜ್ವರ, ನೆಗಡಿ ಇದ್ದರೆ ಜನದಟ್ಟಣೆ ಜಾಗಗಳಿಗೆ ಹೋಗಬಾರದು
-ಸೋಂಕಿತರು, ಅನಾರೋಗ್ಯ ಪೀಡಿತದೊಂದಿಗೆ ಸಂಪರ್ಕ ಮಾಡಬಾರದು
-ಪೌಷ್ಟಿಕ ಆಹಾರ ಸೇವಿಸಿ, ಹೆಚ್ಚು ನೀರು ಕುಡಿಯಬೇಕು
ಏನು ಮಾಡಬಾರದು?
- ಕರವಸ್ತ್ರ ಸ್ವಚ್ಛಗೊಳಿಸದೆ ಬಳಸುವುದು, ಟಿಶ್ಯೂ ಪೇಪರ್ ಪುನರ್ ಬಳಕೆ ಬೇಡ.
- ಸೋಂಕಿತರೊಂದಿಗೆ ಸಂಪರ್ಕ, ಅವರ ಬಳಸಿದ ವಸ್ತುಗಳ ವಿನಿಮಯ ಬೇಡ
- ಪದೇ ಪದೇ ಕಣ್ಣು, ಮೂಗು ಹಾಗೂ ಬಾಯಿ ಮುಟ್ಟಿಕೊಳ್ಳಬೇಡಿ
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ
- ವೈದ್ಯರನ್ನು ಸಂಪರ್ಕಿಸದೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ