ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ನೇಕಾರಿಕೆ ಉದ್ಯಮ ಮತ್ತು ನೇಕಾರರಿಗೆ ಕಂಟಕವಾಗಿರುವ ರೇಪಿಯರ್‌ ಮಗ್ಗದ ಸೀರೆಗಳು ಹಾಗೂ ಸೂರತ್‌ ಮತ್ತಿತರ ಕಡೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಕಡಿಮೆ ವೆಚ್ಚದ ಸೀರೆಗಳ ನಿಯಂತ್ರಣಕ್ಕೆ ಒತ್ತಾಯಿಸಿ ಮಂಗಳವಾರ ಸ್ಕೌಟ್‌ ಕ್ಯಾಂಪ್‌ ರಸ್ತೆಯಲ್ಲಿ ರಸ್ತೆತಡೆ ನಡೆಸಿದ ನೇಕಾರರು, ಕೈಮಗ್ಗ ಹಾಗೂ ಜವಳಿ ಇಲಾಖೆ ಜಿಲ್ಲಾ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರದ ನೇಕಾರಿಕೆ ಉದ್ಯಮ ಮತ್ತು ನೇಕಾರರಿಗೆ ಕಂಟಕವಾಗಿರುವ ರೇಪಿಯರ್‌ ಮಗ್ಗದ ಸೀರೆಗಳು ಹಾಗೂ ಸೂರತ್‌ ಮತ್ತಿತರ ಕಡೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಕಡಿಮೆ ವೆಚ್ಚದ ಸೀರೆಗಳ ನಿಯಂತ್ರಣಕ್ಕೆ ಒತ್ತಾಯಿಸಿ ಮಂಗಳವಾರ ಸ್ಕೌಟ್‌ ಕ್ಯಾಂಪ್‌ ರಸ್ತೆಯಲ್ಲಿ ರಸ್ತೆತಡೆ ನಡೆಸಿದ ನೇಕಾರರು, ಕೈಮಗ್ಗ ಹಾಗೂ ಜವಳಿ ಇಲಾಖೆ ಜಿಲ್ಲಾ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇಲ್ಲಿನ ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ್‌ ವೃತ್ತದಿಂದ ಅಪೆರಲ್ ಪಾರ್ಕ್‌ ಆವರಣದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಮಗ್ಗ ಹಾಗೂ ಜವಳಿ ಇಲಾಖೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೇಕಾರರು, ಕಚೇರಿ ಮುಂಭಾಗ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರ ಪಾರಂಪರಿಕವಾಗಿ ವಿದ್ಯುತ್‌ ಮಗ್ಗಗಳಿಗೆ ಹಾಗೂ ನೇಕಾರಿಕೆಗೆ ಪ್ರಸಿದ್ದಿ ಪಡೆದಿದೆ. ಇಲ್ಲಿ ನಿತ್ಯ 25 ಸಾವಿರ ಮಗ್ಗಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ಸೀರೆಗಳು ಉತ್ಪಾದನೆಯಾಗುತ್ತವೆ. ಆದರೆ ಸ್ಥಳೀಯ ಮಾರುಕಟ್ಟೆಯ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಇಲ್ಲಿನ ಉತ್ಪನ್ನಗಳನ್ನು ಆಂಧ್ರಪ್ರದೇಶದ ಧರ್ಮಾವರಂ ಸೇರಿದಂತೆ ಅನೇಕ ಕಡೆಗಳಿಗೆ ರಫ್ತು ಮಾಡಿ ಬಳಿಕ, ಬೆಂಗಳೂರಿನಂತಹ ಬೃಹತ್‌ ನಗರಗಳ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ದೊಡ್ಡಬಳ್ಳಾಪುರಕ್ಕೆ ತನ್ನದೇ ಆದ ಬ್ರಾಂಡ್‌ ಹೊಂದಲು ಇಲ್ಲಿಯವರೆಗೆ ಇಲ್ಲಿನ ನೇಕಾರರಿಗೆ ಸಾಧ್ಯವಾಗಿಲ್ಲ. ಹಾಗಿರುವಾಗ ಸೂರತ್‌ನಿಂದ ನೇರ ಸ್ಥಳೀಯ ಮಾರುಕಟ್ಟೆ ಪ್ರವೇಶಿಸುತ್ತಿರುವ ರೇಪಿಯರ್‌ ಮಗ್ಗದ ಸೀರೆಗಳು ಇಲ್ಲಿನ ನೇಕಾರರಿಗೆ ಕಂಟಕವಾಗಿವೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕೂಡಲೇ ನೇಕಾರರ ಸಮಸ್ಯೆಗಳಿಗೆ ದನಿಯಾಗಬೇಕು. ವಿದ್ಯುತ್‌ ಮಗ್ಗ ಮೀಸಲು ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕು. ವಿದ್ಯುತ್‌ ಮಗ್ಗಗಳಲ್ಲಿ ತಯಾರಿಸಲಾಗುತ್ತಿರುವ ಸೀರೆಗಳನ್ನು ರೇಪಿಯರ್‌ ಮಗ್ಗಗಳಲ್ಲಿ ತಯಾರಿಸಬಾರದು. ರೇಪಿಯರ್‌ ಮಗ್ಗಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಪ್ರತಿ ಮಗ್ಗ 10 ವಿದ್ಯುತ್‌ ಮಗ್ಗಗಳಿಗೆ ಸಮವಾಗಿದೆ. ಉತ್ಪಾದನೆ ವೆಚ್ಚವೂ ಕಡಿಮೆ ಇದ್ದು, ಸ್ಥಳೀಯ ನೇಕಾರರು ಕೌಶಲ್ಯ ಹಾಗೂ ಬೆವರು ಸುರಿಸಿ ನೇಯ್ದ ಸೀರೆಗಳೊಂದಿಗೆ ಬೆಲೆ ಸಮರಕ್ಕೆ ನಿಂತಿವೆ. ಇದಕ್ಕೆ ಪೂರಕವಾಗಿ ಕೆಲ ಉದ್ಯಮಿಗಳು ಸೂರತ್‌ನಿಂದ ಕಡಿಮೆ ಬೆಲೆಗೆ ಸೀರೆಗಳನ್ನು ತರಿಸಿಕೊಂಡು ಸ್ಥಳೀಯ ಮಾರುಕಟ್ಟೆಗೆ ನೇರ ಮಾರಾಟ ಮಾಡುವ ಲಾಭಕೋರತನ ಪ್ರದರ್ಶಿಸಿ ನೇಕಾರಿಕೆಯ ಸರ್ವನಾಶಕ್ಕೆ ಟೊಂಕ ಕಟ್ಟಿದ್ದಾರೆ ಎಂದು ದೂರಿದರು.

ದೊಡ್ಡಬಳ್ಳಾಪುರದ ನೇಕಾರಿಕೆ ಅಸ್ಮಿತೆ ಉಳಿವು ಹಾಗೂ ನೇಕಾರರ ಬದುಕಿನ ಸಂಕಷ್ಟ ನಿವಾರಣೆಗೆ ಇಲಾಖೆ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣ ಸಮಿತಿ, ದೊಡ್ಡಬಳ್ಳಾಪುರ ಟೆಕ್ಸ್‌ ಟೈಲ್‌ ವಿವರ್ಸ್ ಅಸೋಸಿಯೇಷನ್, ನೇಕಾರರ ಹೋರಾಟ ಸಮಿತಿ ಮತ್ತು ನೇಕಾರ ಸಂಘಟನೆಗಳ, ನೇಕಾರ ಸಹಕಾರ ಸಂಘಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೇಕಾರ ಮುಖಂಡರಾದ ಪಿ.ಎ.ವೆಂಕಟೇಶ್, ಎನ್,ನರಸಿಂಹಮೂರ್ತಿ, ಡಿ.ವಿ.ಸೂರ್ಯಪ್ರಕಾಶ್, ಆರ್.ಎಸ್.ಶ್ರೀನಿವಾಸ್, ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ, ಡಿ.ಸಿ.ಚೌಡರಾಜ್, ಸುರೇಶ್‌, ಕೆ.ಮಲ್ಲೇಶ್, ಎಂ.ಮುನಿರಾಜು, ಎಂ.ಚೌಡಯ್ಯ, ಕೆ.ರಘುಕುಮಾರ್, ಧೃವಕುಮಾರ್, ಡಿ.ಆರ್.ಬಾಬು, ಡಿ.ವಿ.ಅನಿಲ್ ಕುಮಾರ್, ಭಾಸ್ಕರ್ ಮೂರ್ತಿ, ಎಸ್.ಎನ್.ಮಂಜುನಾಥ್, ಎಸ್.ಎನ್.ಶಿವರಾಂ, ಜೆ.ಎಸ್.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಫೋಟೋ-

23ಕೆಡಿಬಿಪಿ2- ರೇಪಿಯರ್‌ ಮಗ್ಗಗಳ ಸೂರತ್‌ ಸೀರೆಗಳ ಮೇಲೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿ ದೊಡ್ಡಬಳ್ಳಾಪುರದ ಸ್ಕೌಟ್‌ಕ್ಯಾಂಪ್‌ ರಸ್ತೆಯಲ್ಲಿ ರಸ್ತೆತಡೆ ನಡೆಸಲಾಯಿತು.

--

23ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿರುವ ಬೆಂ.ಗ್ರಾ ಜಿಲ್ಲಾ ಜವಳಿ ಇಲಾಖೆ ಕಚೇರಿಗೆ ನೇಕಾರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.